ವಿಜಯಪುರ: ವಿಜಯಪುರದ ಜಿಲ್ಲಾಸ್ಪತ್ರೆ ರೋಗಿಯೋರ್ವನನ್ನು ಅಮಾನವೀಯವಾಗಿ ನಡೆಸಿಕೊಂಡಿತ್ತು. ಅತಿಸಾರದಿಂದ ಬಳಲುತ್ತಿದ್ದ ರೋಗಿಗೆ ತುಂಡು ಬಟ್ಟೆಯನ್ನು ನೀಡದೆ ನಡೆಸಿಕೊಂಡಿತ್ತು, ಇದು ರಾಜ್ಯಾದಾದ್ಯಂತ ಸುದ್ದಿಯಾದ ನಂತರ ಎಚ್ಚೆತ್ತುಕೊಂಡಿದ್ದ ಆಸ್ಪತ್ರೆ ಸಿಬ್ಬಂದಿ ರೋಗಿ ರವಿಗೆ ಬಟ್ಟೆ ತೊಡಿಸಿ ಚಿಕಿತ್ಸೆ ನೀಡಿದ್ದರು, ಆದರೀಗ ಚಿಕಿತ್ಸೆ ಫಲಿಸದೇ ರೋಗಿ ಸಾವನ್ನಪ್ಪಿದ್ದಾನೆ.
ಅತಿಸಾರದಿಂದ ದಾಖಲಾಗಿದ್ದ ರೋಗಿ ರವಿ ಪಾಟೀಲ್ಗೆ ಸರಿಯಾಗಿ ಚಿಕಿತ್ಸೆ ನೀಡದೇ ಆತನನ್ನು ವಾರ್ಡ್ ನಲ್ಲಿ ಬೆತ್ತಲೆಯಾಗಿ ಮಲಗಿಸಲಾಗಿತ್ತು. ಇದನ್ನು ಕನ್ನಡಪರ ಸಂಘಟನೆಯೊಬ್ಬರು ವಿಡಿಯೋ ಮಾಡಿ ಹರಿ ಬಿಟ್ಟಿದ್ದರು. ಈ ಸುದ್ದಿ ರಾಜ್ಯಾದಾದ್ಯಂತ ಬಾರಿ ಸದ್ದು ಮಾಡಿದ್ದಲ್ಲದೇ ಜಿಲ್ಲಾಸ್ಪತ್ರೆ ವೈದ್ಯರು, ಸಿಬ್ಬಂದಿ ವಿರುದ್ಧ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು.
ತಕ್ಷಣ ಎಚ್ಚೆತ್ತುಕೊಂಡಿದ್ದ ಆಸ್ಪತ್ರೆ ಸಿಬ್ಬಂದಿ ರೋಗಿ ರವಿಗೆ ಬಟ್ಟೆ ತೊಡಿಸಿ ಚಿಕಿತ್ಸೆ ನೀಡಿದ್ದರು. ಆದರೆ ರಾತ್ರಿ ತೀವ್ರ ಉಸಿರಾಟದ ತೊಂದರೆಯಿಂದ ರೋಗಿ ರವಿ ಪಾಟೀಲ್ ಸಾವನ್ನಪ್ಪಿದ್ದಾನೆ. ರೋಗಿ ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣವೆಂದು ಅವರ ಸಂಬಂಧಿಕರು ಆರೋಪಿಸಿದ್ದಾರೆ.