ಮುದ್ದೇಬಿಹಾಳ (ವಿಜಯಪುರ): ಪಟ್ಟಣದ ಮೂಲಕ ಹಾಯ್ದು ಹೋಗಿರುವ ರಾಜ್ಯ ಹೆದ್ದಾರಿಯ ನಗರ ಪ್ರದೇಶದಲ್ಲಿ ಬರುವ ರಸ್ತೆಯ ಇಕ್ಕೆಲಗಳಲ್ಲಿ ಸಸಿ ನೆಡಲು ಅಧಿಕಾರಿಗಳಿಗೆ ಸೂಚಿಸಬೇಕು ಎಂದು ಹಸಿರು ತೋರಣ ಗೆಳೆಯರ ಬಳಗದ ಸಂಚಾಲಕ ಮಹಾಬಳೇಶ್ವರ ಗಡೇದ ಅವರು ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಅವರನ್ನು ಒತ್ತಾಯಿಸಿದರು.
ಪಟ್ಟಣದ ಕೆಬಿಎಂಪಿಎಸ್ ಶಾಲೆಯಲ್ಲಿ ಅರಣ್ಯ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಸ್ತೆಗಳ ಪಕ್ಕದಲ್ಲಿ ಸಸಿ ನೆಡುವ ಕುರಿತು ಶಾಸಕರ ಗಮನ ಸೆಳೆದರು. ವಿಜಯಪುರದಲ್ಲಿ ಈಗಾಗಲೇ ರಸ್ತೆಯ ಎರಡೂ ಕಡೆ ಸಸಿಗಳನ್ನು ನೆಡಲಾಗಿದೆ. ಗಿಡಗಳಿಗೆ ರಕ್ಷಣಾ ಸಾಮಗ್ರಿ ಅಳವಡಿಸಿದರೆ ಭವಿಷ್ಯದಲ್ಲಿ ರಸ್ತೆಯನ್ನಾಗಲಿ, ಫುಟ್ಪಾತ್ ಅತಿಕ್ರಮಿಸಿ ಅಂಗಡಿಕಾರರು ಮುಂದೆ ಬರುವುದು ತಪ್ಪುತ್ತದೆ ಎಂದರು.
ಇದಕ್ಕುತ್ತರಿಸಿದ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ, ರಸ್ತೆಯನ್ನು ಅಗಲೀಕರಣಗೊಳಿಸಿ ಅಭಿವೃದ್ಧಿಪಡಿಸಲು ಕೆಲವರು ಅಡ್ಡಗಾಲು ಹಾಕುತ್ತಿದ್ದಾರೆ. ಇನ್ನು ರಸ್ತೆಯ ಇಕ್ಕೆಲಗಳಲ್ಲಿ ಸಸಿ ನೆಡಲು ಬಿಡುತ್ತಾರೆಯೇ? ಎಂದು ಪ್ರಶ್ನಿಸಿ ಬೇರೆ ಕಡೆಗಳಲ್ಲಿ ಸ್ಥಳಾವಕಾಶವನ್ನು ನೋಡಿಕೊಂಡು ಸಸಿ ನೆಡಲು ಸೂಚಿಸಲಾಗುತ್ತದೆ ಎಂದು ಹೇಳಿದರು.