ಮುದ್ದೇಬಿಹಾಳ(ವಿಜಯಪುರ): ರಾಜ್ಯ ಸರಕಾರ ಮೇ 10 ರಿಂದ ಪೂರ್ಣರೂಪದಲ್ಲಿ ಲಾಕ್ಡೌನ್ ಘೋಷಿಸಿರುವ ಹಿನ್ನೆಲೆ ಪಟ್ಟಣಕ್ಕೆ ವಿವಿಧ ಹಳ್ಳಿಗಳು, ಪಟ್ಟಣದ ನಿವಾಸಿಗಳು ಅಡುಗೆ ಎಣ್ಣೆಗೆ ಮುಗಿಬಿದ್ದ ಘಟನೆ ಶನಿವಾರ ಜರುಗಿದೆ.
ಪಟ್ಟಣದ ಬಸವೇಶ್ವರ ವೃತ್ತದ ಸಮೀಪದಲ್ಲಿರುವ ಬಾಗಲಕೋಟ ಕಿರಾಣಿ ಅಂಗಡಿಯಲ್ಲಿ ಅಡುಗೆ ಎಣ್ಣೆ ಹೋಲ್ಸೇಲ್ ಆಗಿ ಮಾರಾಟ ಮಾಡಲಾಗುತ್ತಿದೆ. ಬೆಳಗ್ಗೆಯೇ ಜನರು ಬಂದು ಸಾಮಾಜಿಕ ಅಂತರವೂ ಇಲ್ಲದೇ ಅಡುಗೆ ಎಣ್ಣೆ ಖರೀದಿಗೆ ಮುಗಿಬಿದ್ದರು.
ತಾವು ತಂದಿದ್ದ ಎಣ್ಣೆ ತುಂಬುವ ಕ್ಯಾನ್ಗಳನ್ನು ಸರದಿಯಲ್ಲಿ ಹಚ್ಚಿ ನಿಂತಿದ್ದರು. ಈ ವೇಳೆ ಜನಜಂಗುಳಿ ಹೆಚ್ಚುತ್ತಲೇ ಅಂಗಡಿಯ ಮಾಲೀಕ ಅಂಗಡಿ ಬಾಗಿಲು ಬಂದ್ ಮಾಡಿ ಎಣ್ಣೆ ಮಾರಾಟ ಸ್ಥಗಿತಗೊಳಿಸಿದರು.
ಆದರೂ ಬಿಡದೆ ಗ್ರಾಹಕರು ಅಂಗಡಿಯ ಮಾಲೀಕನಿಗೆ ಎಣ್ಣೆ ಕೊಡುವಂತೆ ಬೇಡಿದರು. ಸ್ಥಳಕ್ಕೆ ಆಗಮಿಸಿದ ಗೃಹರಕ್ಷಕ ಸಿಬ್ಬಂದಿ ಸೇರಿದ್ದ ಜನರನ್ನು ಅಲ್ಲಿಂದ ತೆರವುಗೊಳಿಸಿದರು.
ಇನ್ನು, ಪಟ್ಟಣದ ಹಳೆ ತಹಶೀಲ್ದಾರ್ ಕಚೇರಿ ಎದುರಿಗೆ ತರಕಾರಿ ಕೊಳ್ಳಲೆಂದು ಜನರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು. ಈ ನಡುವೆ ಕೊರೊನಾ ಭೀತಿ ಇವರಿಗಿಲ್ಲವೆ ಎಂಬ ಮಾತುಗಳು ಕೇಳಿ ಬಂದವು.
ಮಾಸ್ಕ್ ಜಾಗೃತಿ ಮೂಡಿಸಿದ ಸಮಾಜಸೇವಕರು : ಪಟ್ಟಣದಲ್ಲಿ ಮಾಸ್ಕ್ ಹಾಕಿಕೊಳ್ಳದೆ ತಿರುಗಾಡುತ್ತಿರುವವರನ್ನು ಹುಡುಕಾಡಿ ಅವರಿಗೆ ಉಚಿತವಾಗಿ ಮಾಸ್ಕ್ ವಿತರಣೆಯನ್ನು ಸಮಾಜ ಸೇವಕರಾದ ಸಿದ್ಧನಗೌಡ ಪಾಟೀಲ, ಪ್ರಕಾಶ ಕೆಂಧೂಳಿ ಮಾಡಿದರು.