ಬೆಂಗಳೂರು: ರಾಜಧಾನಿ ಬೆಂಗಳೂರು ನಗರದಲ್ಲಿ ಪ್ರಸ್ತುತ ಅಸ್ತಿತ್ವ ಉಳಿಸಿಕೊಂಡಿರುವ 185 ಕೆರೆಗಳ ನಿರ್ವಹಣೆಗೆ ವರ್ಷಕ್ಕೆ 650 ಕೋಟಿ ರೂ. ಹಣ ಬೇಕು. ಅದಕ್ಕಾಗಿ ಖಾಸಗಿ ಸಂಸ್ಥೆಗಳಿಂದ ನೆರವು ಪಡೆದುಕೊಳ್ಳಲಾಗುತ್ತಿದೆ ಎಂದು ಕೆರೆಗಳ ಅಭಿವೃದ್ಧಿ ಮತ್ತು ನಿರ್ವಹಣೆಯನ್ನು ಖಾಸಗಿ ಸಂಸ್ಥೆಗಳಿಗೆ ವಹಿಸುವ ತನ್ನ ನೀತಿಯನ್ನು ಸರ್ಕಾರ ಸಮರ್ಥಿಸಿಕೊಂಡಿದೆ.
ಬೆಂಗಳೂರಿನ ಕೆರೆಗಳು ಮತ್ತು ರಾಜಕಾಲುವೆಗಳ ಒತ್ತುವರಿ ತೆರವುಗೊಳಿಸಿ ಅವುಗಳನ್ನು ರಕ್ಷಿಸಲು ಸರ್ಕಾರಕ್ಕೆ ಅಗತ್ಯ ನಿರ್ದೇಶನಗಳನ್ನು ನೀಡಬೇಕು ಎಂದು 2014ರಲ್ಲಿ ಸಲ್ಲಿಸಲಾಗಿರುವ ವಿವಿಧ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ಹಾಗೂ ನ್ಯಾ. ಕೆ.ವಿ.ಅರವಿಂದ್ ಅವರಿದ್ದ ವಿಭಾಗೀಯ ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಕೆರೆಗಳನ್ನು ಉಳಿಸಬೇಕು, ರಕ್ಷಿಸಬೇಕು ಎನ್ನುವುದು ಅರ್ಜಿದಾರರ ಉದ್ದೇಶವಾಗಿದೆ. ಹಣ ಖರ್ಚಾಗುತ್ತದೆ ಎಂದು ಹೇಳಿ ಕೆರೆಗಳನ್ನು ಸಂಪೂರ್ಣವಾಗಿ ಖಾಸಗಿಯವರ ಸುಪರ್ದಿಗೆ ನೀಡುವುದು ಅಪಾಯಕಾರಿ. ಹೀಗಿದ್ದಾಗ ಬಿಬಿಎಂಪಿ, ಸರ್ಕಾರದ ಜವಾಬ್ದಾರಿ ಏನು?. ನಿರ್ವಹಣೆಗೆ ಖಾಸಗಿ ಸಂಸ್ಥೆಗಳಿಂದ ಹಣ ಪಡೆದುಕೊಳ್ಳಲಿ, ಅದಕ್ಕೆ ನಮ್ಮ ಆಕ್ಷೇಪವಿಲ್ಲ. ಆದರೆ, ನಿರ್ವಹಣೆ ಖಾಸಗಿಯವರಿಗೆ ನೀಡಿದರೆ ಸಾರ್ವಜನಿಕ ಕೆರೆಗಳನ್ನು ಖಾಸಗಿಯವರ ಹಿಡಿತಕ್ಕೆ ಮುಕ್ತ ಅವಕಾಶ ಮಾಡಿಕೊಟ್ಟಂತಾಗಿದೆ. ಮುಖ್ಯವಾಗಿ, ಸರ್ಕಾರದ ಈ ನೀತಿ ೨೦೨೦ರ ಹೈಕೋರ್ಟ್ ಆದೇಶಕ್ಕೆ ವಿರುದ್ಧವಾಗಿದೆ ಎಂದು ಆಕ್ಷೇಪಿಸಿದರು.
ಸರ್ಕಾರದ ನೀತಿಯನ್ನು ಸಮರ್ಥಿಸಿಕೊಂಡ ಅಡ್ವೊಕೇಟ್ ಜನರಲ್ ಕೆ.ಶಶಿಕಿರಣ್ ಶೆಟ್ಟಿ, ಅರ್ಜಿದಾರರ ಪರ ವಕೀಲರು ಕಲ್ಪನೆಗಳ ಆಧಾರದಲ್ಲಿ ನಕಾರಾತ್ಮಕ ವಾದ ಮಂಡಿಸುತ್ತಿದ್ದಾರೆ. ಸಕಾರಾತ್ಮಕ ವಾದಗಳನ್ನಿಟ್ಟರೆ ಅದನ್ನು ಸರ್ಕಾರ ಒಪ್ಪಿಕೊಳ್ಳುತ್ತದೆ ಮತ್ತು ಅನುಮಾನಗಳಿಗೆ ಉತ್ತರ ಕೊಡುತ್ತದೆ. ಸರ್ಕಾರದ ಉದ್ದೇಶವೂ ಕೆರೆಗಳನ್ನು ಉಳಿಸಬೇಕು ಎಂದಾಗಿದೆ. ಈ ಅರ್ಜಿ 2014ರಿಂದ ಬಾಕಿ. ಈಗ 2024ರಲ್ಲಿ ನಾವಿದ್ದೇವೆ. ಕಳೆದ 10 ವರ್ಷಗಳಲ್ಲಿ ನಗರದ ಕೆರೆಗಳು ನಿರ್ವಹಣೆ, ಅಭಿವೃದ್ಧಿ ಇಲ್ಲದೆ ಸೊರಗುತ್ತಿವೆ. ನಿಜವಾಗಿ ಈ ಅರ್ಜಿ ಬಾಕಿ ಇರುವುದರಿಂದ ನಗರದ ಕೆರೆಗಳು ನರಳುತ್ತಿವೆ. ನಗರದಲ್ಲಿರುವ 185 ಕೆರೆಗಳ ನಿರ್ವಹಣೆಗೆ ವರ್ಷಕ್ಕೆ ಅಂದಾಜು 650 ಕೋಟಿ ರೂ. ಬೇಕು. ಅದಕ್ಕಾಗಿಯೇ ಸರ್ಕಾರ ಖಾಸಗಿಯವರ ನೆರವು ಪಡೆದುಕೊಳ್ಳುತ್ತಿದೆ ಎಂದು ವಿವರಿಸಿದರು.
ವಾದ ಆಲಿಸಿದ ನ್ಯಾಯಪೀಠ ತೀರ್ಪು ಕಾಯ್ದಿರಿಸಿದೆ.
ಇದನ್ನೂ ಓದಿ: ರಾಜಕಾಲುವೆ ಒತ್ತುವರಿ: ಸರ್ಕಾರ, ಬಿಬಿಎಂಪಿಗೆ ಹೈಕೋರ್ಟ್ ನೋಟಿಸ್