ಮುದ್ದೇಬಿಹಾಳ: ವಾಸ ಮಾಡಲು ನಮಗೆ ಮನೆ ಇಲ್ಲ. ನೋಡಬನ್ನಿ, ಪ್ರತಿ ಬಾರಿ ಬಂದಾಗಲೂ ಹಿಂದಿನವರು ವೋಟು ಕೇಳಿಕೊಂಡು ಹೋಗಿಬಿಡುತ್ತಾರೆ. ನೀವಾದರೂ ನಮಗೆ ಮನೆ ಕೊಡುವ ಕೆಲಸ ಮಾಡಿ ಎಂದು ತಾಲೂಕಿನ ಹಂದ್ರಾಳ ಗ್ರಾಮದ ವಸತಿ ರಹಿತ ಮಹಿಳೆಯರು ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಅವರಲ್ಲಿ ಕೈ ಮುಗಿದು ಬೇಡಿಕೊಂಡಿದ್ದಾರೆ.
ಶಾಸಕರಿಗೆ ವಸತಿ ಅಹವಾಲು ಸಲ್ಲಿಸಿದ ಮಹಿಳೆಯರು: ತಾಲೂಕಿನ ಹಂದ್ರಾಳ ಗ್ರಾಮದ ಮರಗಮ್ಮ ದೇವಸ್ಥಾನದ ಸಮುದಾಯ ಭವನ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಲು ತೆರಳುತ್ತಿದ್ದ ಶಾಸಕರನ್ನು ಮಧ್ಯೆ ತಡೆದು ನಿಲ್ಲಿಸಿದ ಗ್ರಾಮದ ವೃದ್ಧ ಮಹಿಳೆಯರು ತಮಗೆ ಇರಲು ಮನೆ ಇಲ್ಲ. ಮನೆ ಕಟ್ಟಿಸಿಕೊಡಿ ಎಂದು ವಿನಂತಿಸಿದರಲ್ಲದೆ ನೀವು ಹೇಳಿ ಹೋಗಬೇಡಿ, ನಮ್ಮ ಕೆಲಸ ಮಾಡಿಕೊಡಿ ಎಂದು ಆಗ್ರಹಿಸಿದರು.
ಇದಕ್ಕೆ ತಕ್ಷಣ ಸ್ಪಂದಿಸಿದ ಶಾಸಕರು ತಮ್ಮ ಆಪ್ತಸಹಾಯಕ ಬಸನಗೌಡ ಪಾಟೀಲ ನಡಹಳ್ಳಿ ಅವರಿಗೆ ತಿಳಿಸಿ ವಸತಿ ರಹಿತ ಮಹಿಳೆಯರ ಹೆಸರುಗಳನ್ನು ಪಟ್ಟಿ ಮಾಡಿಕೊಳ್ಳಲು ತಿಳಿಸಿದರು. ಈ ವೇಳೆ ಮುದ್ದೇಬಿಹಾಳ ಪುರಸಭೆ ಸದಸ್ಯೆ ಸಂಗೀತಾ ದೇವರಳ್ಳಿ ಗ್ರಾಮದ ಮಹಿಳೆಯರ ನೆರವಿಗೆ ನಿಂತರು. ಮುಖಂಡ ಬಾಬುಗೌಡ ಪಾಟೀಲ, ಮಂಜುಳಾ ಮೇಟಿ ಮೊದಲಾದವರು ಇದ್ದರು.
ಶಾಲೆ ಕಟ್ಟಡ ಪರಿಶೀಲಿಸಿದ ಶಾಸಕ: ಹಂದ್ರಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಕೊಠಡಿಗಳ ಕೊರತೆ ಪರಿಶೀಲನೆ ಮಾಡಿದ ಶಾಸಕ ನಡಹಳ್ಳಿ, ಹೆಚ್ಚುವರಿ ಕೋಣೆಗಳ ನಿರ್ಮಾಣಕ್ಕೆ ಪ್ರಸ್ತಾವನೆ ಸಿದ್ಧಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.