ವಿಜಯಪುರ : ರಷ್ಯಾ ಹಾಗೂ ಉಕ್ರೇನ್ ನಡುವೆ ನಡೆಯುತ್ತಿರುವ ಯುದ್ಧದ ಪರಿಣಾಮ ವಿದ್ಯಾಭ್ಯಾಸಕ್ಕೆ ಹೋಗಿರುವ ಕರ್ನಾಟಕದ ವಿದ್ಯಾರ್ಥಿಗಳು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಇವರ ದುಸ್ಥಿತಿ ತಿಳಿದು ಪೋಷಕರು ಕಣ್ಣೀರಾಗ್ತಿದ್ದಾರೆ.
ಉಕ್ರೇನ್ನಲ್ಲಿ ಎಂಬಿಬಿಎಸ್ 2ನೇ ಸೆಮಿಸ್ಟರ್ ಓದುತ್ತಿರುವ ವಿಜಯಪುರದ ಗುರುಪಾದೇಶ್ವರ ನಗರದ ಮಲ್ಲನಗೌಡ ಕವಡಿಮಟ್ಟಿ ಹಾಗೂ ಕಮಲಾಕ್ಷಿ ಎಂಬುವರ ಹಿರಿಯ ಪುತ್ರಿ ಸುಚಿತ್ರಾ ಕವಡಿಮಟ್ಟಿ ಎಂಬುವರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕಳೆದ ಎರಡು ದಿನಗಳಿಂದ ಬಂಕರ್ನಲ್ಲಿ ಸ್ನೇಹಿತೆಯರ ಜತೆ ಇರುವ ಸುಚಿತ್ರಾಗೆ ಅಲ್ಲಿ ಅನ್ನ, ನೀರು ಸಹ ಸಿಕ್ಕಿಲ್ಲ. ಕೇವಲ ಬ್ರೇಡ್ ತಿಂದು ಕಾಲ ಕಳೆಯುತ್ತಿದ್ದಾರೆ.
ಈ ವಿಷಯವನ್ನು ಆಕೆ ತನ್ನ ಪೋಷಕರ ಜತೆ ಹಂಚಿಕೊಂಡಿದ್ದು, ಇದರಿಂದ ಪೋಷಕರು ಮತ್ತಷ್ಟು ಆತಂಕಕ್ಕೆ ಒಳಗಾಗಿದ್ದಾರೆ. ಮಗಳಿಗೆ ಅನ್ನ-ನೀರು ಸಿಗುತ್ತಿಲ್ಲ ಎಂದು ಕೇಳಿ ಇವರು ಸಹ ಅನ್ನ-ನೀರು ಬಿಟ್ಟು ಮಗಳು ಸುರಕ್ಷಿತವಾಗಿ ಬರಲಿ ಎಂದು ಪ್ರಾರ್ಥಿಸುತ್ತಿದ್ದಾರೆ.
ಇತ್ತ ಉಕ್ರೇನ್‌ನಲ್ಲಿರುವ ಭಾರತದ ರಾಯಭಾರಿ ಕಚೇರಿಯಿಂದಲೂ ಯಾವುದೇ ಮಾಹಿತಿ ಲಭ್ಯವಾಗುತ್ತಿಲ್ಲ. ಆಕೆಯ ಪೋಷಕರು ಸಹ ವಿಜಯಪುರ ಜಿಲ್ಲಾಡಳಿತ ಕಚೇರಿಗೆ ತೆರಳಿ ಸಹಾಯ ವಾಣಿಗೆ ಮಾಹಿತಿ ನೀಡಿದ್ದರೂ ಸಹ ಅವರಿಂದ ಯಾವುದೇ ಉತ್ತರ ಬಂದಿಲ್ಲ. ಇದು ಇನ್ನಷ್ಟು ಸಂಕಷ್ಟಕ್ಕೆ ಎಡೆ ಮಾಡಿಕೊಟ್ಟಿದೆ. ಮಗಳು ಸುರಕ್ಷಿತವಾಗಿ ವಾಪಸ್ ದೇಶಕ್ಕೆ ಬರಲೆಂದು ಕಂಡ ಕಂಡ ದೇವರಲ್ಲಿ ಪೋಷಕರು ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ.
ಇದನ್ನೂ ಓದಿ: ಉಕ್ರೇನ್ನಲ್ಲಿ ಸಿಲುಕಿದ ತುಮಕೂರಿನ ಅಕ್ಕ ತಮ್ಮ.. ಆತಂಕದಲ್ಲಿರುವ ಪೋಷಕರಿಗೆ ಧೈರ್ಯ ತುಂಬಿದ ಶಾಸಕ
ಸಿಗದ ಸಂಪರ್ಕ : ಮಗಳು ಸುಚಿತ್ರಾ ಜತೆ ನಿನ್ನೆ ಸಂಜೆ ಅವರ ತಾಯಿ-ತಂದೆ ವಿಡಿಯೋ ಕಾಲ್ ಮೂಲಕ ಮಾತನಾಡಿದಾಗ, ಸುಚಿತ್ರಾ ತನ್ನ ಆತಂಕ ತೋಡಿಕೊಂಡಿದ್ದಳು. ಇಲ್ಲಿ ಹಿಮಪಾತದ ಜತೆ ಬಾಂಬ್‌ಗಳ ಶಬ್ದ ಕೇಳುತ್ತಿದೆ. ಪೊಲೀಸರು ಸೈರನ್ ಕೂಗಿದರೆ ತಕ್ಷಣ ಬಂಕರ್ ಒಳಗೆ ಹೋಗಿ ಕುಳಿತುಕೊಳ್ಳಬೇಕು.
ಸರಿಯಾದ ಗಾಳಿ ಇಲ್ಲಿ ಬರುವುದಿಲ್ಲ, ಎರಡು ದಿನದಿಂದ ಊಟ, ನೀರು ಸಹ ಸಿಗುತ್ತಿಲ್ಲ. ನನ್ನ ಹೇಗಾದರೂ ಮಾಡಿ ಭಾರತಕ್ಕೆ ವಾಪಸ್ ಕರೆಯಿಸಿಕೊಳ್ಳಿ ಎಂದು ಕಣ್ಣೀರು ಹಾಕುತ್ತಿದ್ದಾಳೆ ಎಂದು ಆಕೆಯ ಪೋಷಕರು ತಮ್ಮ ಅಳಲನ್ನು ತೋಡಿ ಕೊಂಡಿದ್ದಾರೆ. ಆ ಬಳಿಕ ಮಗಳು ಫೋನ್ ಸಂಪರ್ಕಕ್ಕೆ ಸಿಕ್ಕಿಲ್ಲ ಎಂದು ಸುಚಿತ್ರಾ ತಾಯಿ ಕಮಲಾಕ್ಷಿ ಹೇಳುವಾಗ ಅವರ ಕಣ್ಣಿಂಚಿನಲ್ಲಿ ನೀರು ಕಾಣುತ್ತಿದ್ದವು.