ಮುದ್ದೇಬಿಹಾಳ : ಸಂಘಟನೆಗಳು ಸಮಾಜದ ಸ್ವಾಸ್ಥ್ಯ ಕಾಪಾಡುವಲ್ಲಿ ಶ್ರಮಿಸಬೇಕು ಎಂದು ತಾಳಿಕೋಟೆ ಪಿಎಸ್ಐ ಎಸ್.ಎಚ್.ಪವಾರ ಹೇಳಿದರು.
ತಾಳಿಕೋಟೆ ಪೊಲೀಸ್ ಠಾಣೆಯಲ್ಲಿ ನಮ್ಮ ಕರ್ನಾಟಕ ಸಂಘಟನೆಯ ನೇತೃತ್ವದಲ್ಲಿ ಹಮ್ಮಿಕೊಂಡ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜನರ ಒಳಿತಿಗಾಗಿ ಪ್ರತಿಭಟಿಸುವಂತಹ ಹಕ್ಕನ್ನು ಸಂಘಟನೆಗಳು ಪಡೆದುಕೊಂಡಿರುತ್ತವೆ. ಸಂಘಟಕರು ಪೊಲೀಸ್ ಇಲಾಖೆಗೆ ಅಪರಾಧ ತಡೆ ಕುರಿತು ಮಾಹಿತಿ ಒದಗಿಸುವಂತಹ ಕೆಲಸ ಮಾಡಬೇಕು, ಸಮಾಜದಲ್ಲಿ ಶಾಂತಿ ಸಾಮರಸ್ಯ ಮೂಡಿಸಲು ಸಹಕರಿಸಬೇಕೆಂದು ಹೇಳಿದರು.
ನಮ್ಮ ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾ ಅಧ್ಯಕ್ಷ ನಾಗರಾಜ ಮೋಟಗಿ, ಹಾಗೂ ಸಂಘಟನೆಯ ಕಾರ್ಯಕರ್ತರು ನೂತನ ಪಿಎಸ್ಐ ಎಸ್.ಎಚ್.ಪವಾರ, ಹಾಗೂ ಅಪರಾಧ ವಿಭಾಗ ಪಿ.ಎಸ್.ಐ ಗಂಗೂಬಾಯಿ ಜಿ ಬಿರಾದಾರ ಅವರನ್ನು ಸನ್ಮಾನಿಸಿದರು.
ಈ ಸಮಯದಲ್ಲಿ ಸಂಘಟನೆಯ ಮುಖಂಡರುಗಳಾದ ಕುಮಾರಗೌಡ ಪಾಟೀಲ, ಮಹಾಂತೇಶ ಮೋಟಗಿ, ರಾಜು ಕೊಡಗಾನೂರ, ಕಾಶೀನಾಥ್ ಕೆಂಭಾವಿ, ನಜೀರ ಚೋರಗಸ್ತಿ, ಬಸವರಾಜ ಚಿನಗುಡಿ ಮೊದಲಾದವರು ಉಪಸ್ಥಿತರಿದ್ದರು.