ಮುದ್ದೇಬಿಹಾಳ(ವಿಜಯಪುರ): ವಿದ್ಯುತ್ ತಿದ್ದುಪಡಿ ಮಸೂದೆಯಲ್ಲಿ ಎಲ್ಲಾ ವಿದ್ಯುತ್ ವಿತರಣಾ ಕಂಪನಿಗಳನ್ನು ಖಾಸಗೀಕರಣಗೊಳಿಸುವ ಉದ್ದೇಶ ಹೊಂದಿದ್ದು, ಯಾವುದೇ ಕಾರಣಕ್ಕೂ ಈ ಕಾಯ್ದೆ ಅನುಷ್ಠಾನಕ್ಕೆ ಬಿಡಬಾರದು ಎಂದು ಆಗ್ರಹಿಸಿ ಹೆಸ್ಕಾಂ ಉಪ ವಿಭಾಗದ 4 ಶಾಖೆಗಳ ನೌಕರರು ಕಪ್ಪು ಪಟ್ಟಿ ಧರಿಸಿ ಸಾಂಕೇತಿಕ ಪ್ರತಿಭಟನೆ ನಡೆಸಿದರು.
ಹೆಸ್ಕಾಂ ಎಇಇ ರಾಜಶೇಖರ ಹಾದಿಮನಿ ಮಾತನಾಡಿ, "ಈ ಕಾಯ್ದೆ ಜಾರಿಯಿಂದಾಗಿ ವಿದ್ಯುತ್ ಬೆಲೆ ಆಯೋಗ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳಲಿದ್ದು, ರೈತರು, ಗ್ರಾಹಕರು, ಜನಸಾಮಾನ್ಯರ ಹಿತವನ್ನು ಬಲಿ ಕೊಡಲಿದೆ" ಎಂದರು.
ಢವಳಗಿ ಶಾಖಾಧಿಕಾರಿ ಬಿ.ಎಸ್.ಯಲಗೋಡ ಮಾತನಾಡಿ, ಈ ಕಾಯ್ದೆ ಜಾರಿಯಾದರೆ ನೌಕರರು ಬೀದಿಗೆ ಬರುತ್ತೇವೆ. ಸೇವಾ ಭದ್ರತೆಯನ್ನು ಕಸಿದುಕೊಂಡು ಹೆಸ್ಕಾಂನಲ್ಲಿ ಕೆಲಸ ಮಾಡುವವರನ್ನು ಬೀದಿಗೆ ತಳ್ಳಲಿದೆ ಎಂದು ಹೇಳಿದರು.
ಈ ತಿದ್ದುಪಡಿಯಿಂದಾಗಿ ನೌಕರರು ತೀವ್ರ ಸಂಕಷ್ಟಕ್ಕೆ ಒಳಗಾಗಲಿದ್ದಾರೆ. ಕೇಂದ್ರ ಸರ್ಕಾರ ಹೆಸ್ಕಾಂ ಸೇವೆಯನ್ನು ಖಾಸಗೀಕರಣ ಮಾಡಲು ಹೊರಟಿದ್ದು, ಇದರಿಂದ ನೌಕರರು ಬೀದಿಗೆ ಬೀಳಲಿದ್ದಾರೆ ಎಂದು ಪ್ರತಿಭಟನಾನಿರತರು ಆಕ್ರೋಶ ಹೊರಹಾಕಿದ್ದಾರೆ.