ಮುದ್ದೇಬಿಹಾಳ (ವಿಜಯಪುರ): ಕೊರೊನಾ ವೈರಸ್ ಹಾವಳಿ ಹೆಚ್ಚಾಗುತ್ತಿರುವುದರಿಂದ ರಾಜ್ಯ ಸರ್ಕಾರ ಸಿಇಟಿ, ವೈದ್ಯಕೀಯ, ವೃತ್ತಿಪರ ಕಾನೂನು ಸೇರಿದಂತೆ ಎಲ್ಲ ಪದವಿ ಅಂತಿಮ ವರ್ಷದ ಪರೀಕ್ಷೆಗಳನ್ನು ರದ್ದುಗೊಳಿಸುವಂತೆ ಕೋರಿ, ಎನ್ಎಸ್ಯುಐ ಜಿಲ್ಲಾ ಸಂಘಟನೆಯ ಪದಾಧಿಕಾರಿಗಳು ತಹಶೀಲ್ದಾರ್ ಜಿ.ಎಸ್. ಮಳಗಿ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಪಟ್ಟಣದ ತಹಶೀಲ್ದಾರ್ ಕಚೇರಿಗೆ ತೆರಳಿ ಮನವಿ ಸಲ್ಲಿಸಿರುವ ಸಂಘಟನೆಯ ಪದಾಧಿಕಾರಿಗಳು, ಕೊರೊನಾದಂತಹ ಕೆಟ್ಟ ಪರಿಸ್ಥಿತಿಯಲ್ಲಿ ಸಿಇಟಿ, ವೈದ್ಯಕೀಯ, ವೃತ್ತಿಪರ ಕಾನೂನು ಸೇರಿದಂತೆ ಎಲ್ಲ ಪದವಿ, ಅಭಿಯಂತರರ ಪದವಿ ಅಂತಿಮ ವರ್ಷದ ಪರೀಕ್ಷೆಯನ್ನು ನಡೆಸುವುದು ಸರಿಯಲ್ಲ ಎಂದರು.

ವಿದ್ಯಾರ್ಥಿಗಳ ಭವಿಷ್ಯ ಹಾಗೂ ಜೀವನ ಬಹುಮುಖ್ಯ. ಸರ್ಕಾರ ಈ ವಿಷಯದಲ್ಲಿ ನಿರ್ಲಕ್ಷ್ಯ ಧೋರಣೆ ತಾಳಬಾರದು. ಈಗಾಗಲೇ ನೀಟ್, ಜೆಇಇ ಪರೀಕ್ಷೆಯನ್ನು ಮುಂದೂಡಲಾಗಿದ್ದು ಪ್ರಥಮ, ದ್ವಿತೀಯ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಬಡ್ತಿ ನೀಡಿರುವುದು ಸ್ವಾಗತಾರ್ಹ ಕ್ರಮವಾಗಿದೆ. ಕೂಡಲೇ ಈ ಪದವಿ ಅಂತಿಮ ವರ್ಷದ ಪರೀಕ್ಷೆಯನ್ನು ರದ್ದು ಮಾಡಿ, ಶೇ.10ರಷ್ಟು ಹೆಚ್ಚುವರಿ ಅಂಕಗಳಿಗೆ ಹಿಂದಿನ ಸಾಧನೆಯ ಆಧಾರದ ಮೇಲೆ ಮುಂಬಡ್ತಿ ನೀಡಬೇಕು ಎಂದು ಮನವಿ ಮಾಡಿದ್ದಾರೆ.