ಮುದ್ದೇಬಿಹಾಳ : ಸ್ವಾತಂತ್ರ್ಯ ಸಿಕ್ಕು 72 ವರ್ಷ ಗತಿಸಿದ್ರೂ ಈವರೆಗೆ ಒಬ್ಬ ಮುಸ್ಲಿಂ ನಾಯಕ ಕಾಂಗ್ರೆಸ್ ಪಕ್ಷದ ಅಧ್ಯಕ್ಷನಾಗಲಿಲ್ಲ. ಅವರಿಗೆ ಅಧ್ಯಕ್ಷರಾಗುವ ಅರ್ಹತೆ ಇಲ್ಲವಾ, ಇಂತವರು ಇದ್ದಾರೆ ಎಂದು ಹೆಸರನ್ನಾದ್ರೂ ಚರ್ಚೆ ಮಾಡಿದ್ರಾ, ಅದೂ ಇಲ್ಲ ಎಂದು ಶಾಸಕ ಸಿ ಎಂ ಇಬ್ರಾಹಿಂ ಕಾಂಗ್ರೆಸ್ ಪಕ್ಷದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದ ಟಾಪ್‌ಇನ್ ಟೌನ್ ಫಂಕ್ಷನ್ ಹಾಲ್‌ನಲ್ಲಿ ಭಾನುವಾರ ವಿಜಯಪುರ-ಬಾಗಲಕೋಟ ಅವಳಿ ಜಿಲ್ಲೆಗಳ ಮುಖಂಡರ ಸಮಾಲೋಚನಾ ಸಭೆಯಲ್ಲಿ ಮಾತನಾಡಿದ ಅವರು, ಇಸ್ಲಾಂ ಜನಾಂಗದವರು ಕೂಡಿ ಬಾಳುವವರು. ಹುಬ್ಬಳ್ಳಿ ಈದ್ಗಾ ಮೈದಾನದ ಉರಿತಾ ಇತ್ತು.
ಜ.5ರಂದು ಆರು ವರ್ಷದ ನನ್ನ ಒಬ್ಬನೇ ಒಬ್ಬ ಮಗ ಸತ್ತ. ಜ.6 ರಂದು ಅಂತ್ಯಕ್ರಿಯೆ ಮಾಡಿ ಹುಬ್ಬಳ್ಳಿಗೆ ಬಂದು ಜನರನ್ನು ಸಮಾಧಾನ ಮಾಡಲು ತೆರಳಿದೆ. ಆಗ ಅಲ್ಲಿದ್ದ ಕೆಲ ತಾಯಂದಿರು ಮಗ ಸತ್ತು ಒಂದು ದಿನವಾಗಿದೆ, ಸಮಾಧಿ ಮಾಡಿ ನೇರವಾಗಿ ಇಲ್ಲಿಗೆ ಬಂದಿದ್ದಿಯಲ್ಲ, ಯಾವ ತಾಯಿ ಹೆತ್ತ ಮಗನಪ್ಪ ನೀನು ಎಂದು ಪ್ರಶ್ನಿಸಿದರು.
ಆಗ ನಾನು ಉತ್ತರಿಸಿದೆ, ತಾಯಿ ಒಬ್ಬ ಮಗನನ್ನು ನಾನು ಕಳೆದುಕೊಂಡಿದ್ದೇನೆ. ನನ್ನ ಮಗ ಸತ್ತರೂ ಚಿಂತೆ ಇಲ್ಲ. ಆದರೆ, ಈ ದ್ವೇಷದ ದಳ್ಳುರಿಯಲ್ಲಿ ಇನ್ನಷ್ಟು ತಂದೆ ತಾಯಂದಿರು ತಮ್ಮ ಮಕ್ಕಳನ್ನು ಕಳೆದುಕೊಳ್ಳಬಾರದು ಎಂದು ಇಲ್ಲಿಗೆ ಬಂದಿದ್ದೇನೆ ಎಂದು ಹೇಳಿ ಅವರ ಸಹಕಾರ ಕೋರಿದ್ದೆ.
ಜ.26, 1995 ರಂದು ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಎರಡೂ ಸಮುದಾಯದ ಬಾಂಧವರ ಜೊತೆಗೂಡಿ ಧ್ವಜಾರೋಹಣ ಮಾಡಿದ್ದು ಈವರೆಗೆ ಯಾವುದೇ ಗಲಭೆಗಳು ಅಲ್ಲಿ ಆಗಿಲ್ಲ ಎಂದು ಇಬ್ರಾಹಿಂ ತಮ್ಮ ಮಗನನ್ನು ಕಳೆದುಕೊಂಡ ಸನ್ನಿವೇಶ ವಿವರಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಎಸ್. ಎಂ. ಪಾಟೀಲ್ ಗಣಿಯಾರ, ಕೆ. ಎಂ. ರಿಸಾಲ್ದಾರ್, ಜಬ್ಬಾರ ಕಲ್ಬುರ್ಗಿ, ಉಸ್ಮಾನಗಣಿ ಹುಮನಾಬಾದ್, ಎಂ.ಸಿ.ಮುಲ್ಲಾ ಮಾತನಾಡಿ, ಅಲ್ಪಸಂಖ್ಯಾತರ ನಾಯಕ ಸಿ. ಎಂ. ಇಬ್ರಾಹಿಂ ಅವರು ಕೈಗೊಳ್ಳುವ ಯಾವುದೇ ನಿರ್ಧಾರಕ್ಕೆ ತಾವು ಬದ್ಧರಿರುವುದಾಗಿ ಹೇಳಿದರು.
ಸಭೆಯಲ್ಲಿ ವಕೀಲರ ಸಂಘದ ಅಧ್ಯಕ್ಷ ಎಂ. ಹೆಚ್. ಕ್ವಾರಿ, ಮಾಜಿ ಅಧ್ಯಕ್ಷ ಎಂ. ಹೆಚ್. ಹಾಲಣ್ಣವರ, ರಸೂಲ್ ದೇಸಾಯಿ, ಅಲ್ಲಾಭಕ್ಷ ಢವಳಗಿ, ಕಾಶೀಂ ಪಟೇಲ್ ಮೂಕಿಹಾಳ, ವಕೀಲರಾದ ಕೆ.ಬಿ.ದೊಡಮನಿ, ಕೆಎಂಸಿ ಜಿಲ್ಲಾಧ್ಯಕ್ಷ ಎಂ.ಆರ್.ಮುಲ್ಲಾ ಮೊದಲಾದವರು ಇದ್ದರು.