ವಿಜಯಪುರ: ಜಿಲ್ಲೆಯಲ್ಲಿ ಇದುವರಿಗೂ ಯಾವುದೇ ಕೊರೊನಾ ಪ್ರಕರಣ ದಾಖಲಾಗಿಲ್ಲ, ಇಂದು ವಿದೇಶಗಳಿಂದ 13 ಜನರು ಜಿಲ್ಲೆಗೆ ವಾಪಸ್ ಆಗಿದ್ದಾರೆ ಎಂದು ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ ತಿಳಿಸಿದರು.
ಜಿಲ್ಲಾ ಪಂಚಾಯತ್ ಸಭಾಭವನದಲ್ಲಿ ತುರ್ತು ಸಭೆ ನಡೆಸಿ ಮಾತನಾಡಿದ ಅವರು, ಕೊರೊನಾ ವೈರಸ್ ಬಗ್ಗೆ ಜಿಲ್ಲೆಯ ಸರ್ಕಾರಿ ಹಾಗೂ ಖಾಸಗಿ ಶಾಲಾ ಕಾಲೇಜುಗಳಲ್ಲಿ ಜಾಗೃತಿ ಮೂಡಿಸಲಾಗುತ್ತದೆ. ಕೊರೊನಾ ವೈರಸ್ ಹೆಚ್ಚಾಗಿರುವ ದೇಶಗಳಿಂದ ಇದುವರಿಗೂ ಯಾರೂ ಬಂದಿಲ್ಲ. ವಿದೇಶಿದಿಂದ ಮರಳಿದ ವ್ಯಕ್ತಿಗಳ ಪೈಕಿ ಇಬ್ಬರ ಗಂಟಲು ದ್ರವವನ್ನ ವೈದ್ಯಕೀಯ ಪರೀಕ್ಷೆ ನಡೆಸಲು ಬೆಂಗಳೂರಿಗೆ ಕಳಿಸಲಾಗಿದೆ.
ಕೆಲವು ವ್ಯಕ್ತಿಗಳು ಸಾಮಾಜಿಕ ಜಾಲತಾಣಗಳ ಮೂಲಕ ಜನರಲ್ಲಿ ಕೊರೊನಾ ಕುರಿತು ಸುಳ್ಳು ಸುದ್ದಿ ಬಿತ್ತರಿಸುತ್ತಿದ್ದಾರೆ. ಅದರ ಕುರಿತು ದೂರು ದಾಖಲಾದರೆ ಕ್ರಮಕ್ಕೆ ಮುಂದಾಗುತ್ತೇವೆ. ಅನುಮಾನವಿರುವ ವ್ಯಕ್ತಿಗಳು ಮಾತ್ರ ಮಾಸ್ಕ್ ಬಳಸಬಹುದು ಇತರ ವ್ಯಕ್ತಿಗಳು ಮಾಸ್ಕ್ ಬಳಸುವ ಅವಶ್ಯಕತೆ ಇಲ್ಲ.
1ರಿಂದ 3ನೇ ತರಗತಿವರಿಗೆ ಮಾರ್ಚ್ 16ರ ವಳಗೆ ವಾರ್ಷಿಕ ಪರೀಕ್ಷೆ ನಡೆಸಬೇಕು ಹಾಗೂ 9ನೇ ತರಗತಿವರಿಗೆ ಮಾರ್ಚ್ 21ರ ವಳಗೆ ಪರೀಕ್ಷೆಗಳನ್ನು ಖಾಸಗಿ ಹಾಗೂ ಸರ್ಕಾರಿ ಶಾಲೆಗಳು ನಡೆಸಬೇಕು ಎಂದರು.