ವಿಜಯಪುರ: ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಹಲವು ತಿಂಗಳಿನಿಂದ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದೆ. ಈ ಹೆದ್ದಾರಿ ವಿಜಯಪುರದಿಂದ ಮಹಾರಾಷ್ಟ್ರದ ಸೊಲ್ಲಾಪುರಕ್ಕೆ ಸಂಪರ್ಕ ಕಲ್ಪಿಸುತ್ತದೆ. ಲಾಕ್ಡೌನ್ನಿಂದ ಕಾಮಗಾರಿ ವಿಳಂಬವಾಗಿದ್ದು, ಈ ಮಾರ್ಗದಲ್ಲಿ ಸಂಚರಿಸುವ ಸಾವಿರಾರು ವಾಹನ ಸವಾರರು ಪರದಾಡುವಂತಾಗಿದೆ.
ಸೊಲ್ಲಾಪುರದಿಂದ ಚಿತ್ರದುರ್ಗಕ್ಕೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ ಮಂದಗತಿಯ ಕಾಮಗಾರಿ ವಾಹನ ಸವಾರರಿಗೆ ಅಪಾಯ ತಂದೊಡ್ಡುವ ಪರಿಸ್ಥಿತಿಗೆ ಕಾರಣವಾಗಬಹದು. ಹಲವು ತಿಂಗಳ ಹಿಂದೆಯೇ ಹೆದ್ದಾರಿ ಅಗಲೀಕರಣ ಹಾಗೂ ಅಭಿವೃದ್ಧಿ ಕಾಮಗಾರಿ ಆರಂಭಿಸಲಾಗಿದೆ. ನಿಗದಿತ ಅವಧಿಗೆ ರಸ್ತೆ ಕೆಲಸ ಅಂತ್ಯವಾಗದೇ ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ ಎಂಬುದು ಸ್ಥಳೀಯರ ಆರೋಪವಾಗಿದೆ.
ಒಂದೇ ರಸ್ತೆ, ದ್ವಿಮುಖ ಸಂಚಾರ: ರಾಷ್ಟ್ರೀಯ ಹೆದ್ದಾರಿ 50ರ ಕಾಮಗಾರಿ ಪ್ರಗತಿಯಲ್ಲಿದೆ. ರಸ್ತೆಯ ಮಧ್ಯದಲ್ಲಿ ಅಲ್ಲಲ್ಲಿ ಪ್ಲೈ ಓವರ್ ಬ್ರಿಡ್ಜ್ಗಳ ನಿರ್ಮಾಣ ಮಾಡಲಾಗುತ್ತಿದೆ. ಹೀಗಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಒಂದೇ ರಸ್ತೆಯಲ್ಲಿ ದ್ವಿಮುಖ ಸಂಚಾರಕ್ಕೆ ಅವಕಾಶ ಕಲ್ಪಿಸಿದ್ದಾರೆ. ವಾಹನ ಸವಾರರು, ಬೈಕ್ ಸವಾರರು ಸ್ವಲ್ಪ ಮೈ ಮರೆತರೂ ಅಪಾಯ ಕಾದಿದೆ.
ನಿಗದಿತ ಅವಧಿಗೆ ಅಂತ್ಯವಾಗದ ಕಾಮಗಾರಿ: ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಕಾಮಗಾರಿಯನ್ನು 2021ರ ಏಪ್ರಿಲ್ಗೆ ಕೊನೆಗೊಳಿಸುವ ಯೋಜನೆ ರೂಪಿಸಲಾಗಿತ್ತು. ಆದ್ರೆ ಶೇ. 50ರಷ್ಟು ಹೆದ್ದಾರಿ ಕಾಮಗಾರಿ ಮುಗಿಯದಿರೋದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇತ್ತ ವಾಹನ ಸವಾರರಿಗೆ ರಾತ್ರಿಯಾದ್ರೆ ಅಪಘಾತದಿಂದ ಪ್ರಾಣ ಕಳೆದುಕೊಳ್ಳುವ ಭಯ ಶುರುವಾಗಿದೆಯಂತೆ. ಹಾಗಾಗಿ ತಕ್ಷಣವೇ ಜಿಲ್ಲಾಡಾಳಿತ ಹೆದ್ದಾರಿ ಕಾಮಗಾರಿ ಪೂರ್ಣಗೊಳಿಸುವಂತೆ ಒತ್ತಾಯಿಸುತ್ತಿದ್ದಾರೆ.
ಈ ಕುರಿತು ಜಿಲ್ಲಾಧಿಕಾರಿಗಳನ್ನು ಕೇಳಿದ್ರೆ, ಲಾಕ್‌ಡೌನ್ ಹೆದ್ದಾರಿ ಕಾಮಗಾರಿಯನ್ನು ಮುಗಿಸಲು ಸ್ವಲ್ಪ ವಿಳಂಬವಾಗುತ್ತಿದೆ. ಬರುವ ವರ್ಷ ಏಪ್ರಿಲ್ ತಿಂಗಳಲ್ಲಿ ಕೊನೆಗೊಳ್ಳುವ ಕಾಮಗಾರಿ 2021ರ ಅಗಸ್ಟ್ ತಿಂಗಳೊಳಗಾಗಿ ಅಂತ್ಯವಾಗುತ್ತದೆ. ನಾನು ಕಾಮಗಾರಿ ಕುರಿತು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳೊಂದಿಗೆ ಚರ್ಚೆ ಮಾಡಿದ್ದೇನೆ ಎಂದರು.