ಮುದ್ದೇಬಿಹಾಳ: ಅಯೋಧ್ಯೆಯಲ್ಲಿ ಆ.5 ರಿಂದ ರಾಮಜನ್ಮ ಭೂಮಿಯ ಶಿಲಾನ್ಯಾಸ ಕಾರ್ಯಕ್ರಮ ನಡೆಯಲಿರುವ ಹಿನ್ನೆಲೆ, ದೇಶದ ವಿವಿಧ ಭಾಗಗಳ ಪುಣ್ಯಕ್ಷೇತ್ರದ ಮೃತ್ತಿಕೆ (ಮಣ್ಣು) ಮತ್ತು ನದಿಗಳ ಜಲವನ್ನು ಸಂಗ್ರಹಿಸಿ ಕಳಿಸಲು ಸೂಚನೆ ನೀಡಿದ್ದು, ಮುದ್ದೇಬಿಹಾಳ ಭಾಗದ ಪುಣ್ಯ ನದಿಗಳು, ದೇವಸ್ಥಾನಗಳ ಮೃತ್ತಿಕೆ, ಜಲವನ್ನು ಕಳಿಸಲಾಯಿತು.
ಪಟ್ಟಣದ ಹನುಮಾನ ದೇವಸ್ಥಾನದಲ್ಲಿ ವಿಶ್ವ ಹಿಂದೂ ಪರಿಷತ್‌ಭಜರಂಗದಳ ಮತ್ತು ಹಿಂದೂ ಜಾಗರಣ ವೇದಿಕೆ ವತಿಯಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸರೂರಿನ ವೇ.ಸಹದೇವಯ್ಯ ಗುರುವಿನ ಅವರಿಗೆ ಈ ವಸ್ತುಗಳನ್ನು ಹಸ್ತಾಂತರಿಸಲಾಯಿತು. ವಿ.ಎಚ್.ಪಿ ಅಧ್ಯಕ್ಷ ಮಾಣಿಕಚಂದ ದಂಡಾವತಿ ಮಾತನಾಡಿ, ನಮ್ಮ ಭಾಗದಲ್ಲಿ ಬರುವ ಕಷ್ಣಾ, ಮಲಪ್ರಭಾ, ಘಟಪ್ರಭಾ, ಡೋಣಿ, ಭೀಮಾ ಹಾಗೂ ಪುಣ್ಯಕ್ಷೇತ್ರಗಳಾದ ಬ.ಬಾಗೇವಾಡಿ ಬಸವೇಶ್ವರ ದೇವಸ್ಥಾನ, ತಂಗಡಗಿಯ ನೀಲಾಂಬಿಕೆ ದೇವಸ್ಥಾನ, ಬಸರಕೋಡದ ಪವಾಡ ಬಸವೇಶ್ವರ ದೇವಸ್ಥಾನ, ನಾಲತವಾಡದ ಶ್ರೀ ಶರಣ ವೀರೇಶ್ವರ ಮಹಾಮನೆಯ ಮಣ್ಣನ್ನು ಸಂಗ್ರಹ ಮಾಡಿ ನೀಡಿದ್ದೇವೆ ಎಂದು ತಿಳಿಸಿದರು.
ಬೀದರ್ ಜಿಲ್ಲಾ ಪ್ರಚಾರಕ ಮಧುಸ್ವಾಮಿ, ಶಿವಾನಂದ ನಾಗರಾಳ, ತಾಲೂಕು ಕಾರ್ಯದರ್ಶಿ ಮಹಾಂತೇಶ ಸಜ್ಜನರ, ಜಗನ್ನಾತ ಗೌಳಿ, ನಿಂಗಣ್ಣ ಮಹೇಂದ್ರಕರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.