ವಿಜಯಪುರ: ಮುದ್ದೇಬಿಹಾಳ ಪಟ್ಟಣದಲ್ಲಿ ರಸ್ತೆ ಅತಿಕ್ರಮಣ ಮಾಡಿ ಕಟ್ಟಲಾಗಿದ್ದ ಕಟ್ಟಡಗಳ ತೆರವು ಕಾರ್ಯಾಚರಣೆ ಪುರಸಭೆ, ಪೊಲೀಸ್ ಇಲಾಖೆ ನೇತೃತ್ವದಲ್ಲಿ ನಡೆಸಲಾಯಿತು.
ಮುಖ್ಯರಸ್ತೆಯಲ್ಲಿದ್ದ ಹಾಗೂ ಬಸ್ ನಿಲ್ದಾಣದ ಮುಂದಿನ ಡಬ್ಬಾ ಹಾಗೂ ತಳ್ಳುಗಾಡಿಗಳ ತೆರವು ಮಾಡಲಾಯಿತು. ಫುಟ್ ಪಾತ್ ತೆರವಿಗೆ ವ್ಯಾಪಾರಿಗಳಿಂದ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಹೆಚ್ಚಿನ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿತ್ತು.
ಹಲವು ವರ್ಷಗಳಿಂದ ವ್ಯಾಪಾರ ಮಾಡಿಕೊಂಡು ಬಂದಿದ್ದು ಯಾವುದೇ ನೋಟೀಸ್ ನೀಡದೆ ಏಕಾಏಕಿ ಅಂಗಡಿ ತೆರವುಗೊಳಿಸಿದರೆ ನಾವು ಎಲ್ಲಿ ಹೋಗಬೇಕೆಂದು ವ್ಯಾಪಾರಿಗಳು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಪರ್ಯಾಯ ಜಾಗ ಒದಗಿಸುವಂತೆ ಪುರಸಭೆ ಅಧಿಕಾರಿಗಳಿಗೆ ಆಗ್ರಹಿಸಿದರು.