ಮುದ್ದೇಬಿಹಾಳ: ಪಟ್ಟಣದ ಪುರಸಭೆಯ ಕಾನೂನು ಸಲಹೆಗಾರರನ್ನು ಬದಲಾಯಿಸಿರುವುದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಆಡಳಿತ ಪಕ್ಷದ ಸದಸ್ಯರು, ಪುರಸಭೆಯ ಅಧ್ಯಕ್ಷೆ ಹಾಗೂ ಮುಖ್ಯಾಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಸಭಾತ್ಯಾಗ ಮಾಡಿದ ಘಟನೆ ಬುಧವಾರ ನಡೆದಿದೆ.
ಓದಿ: ಬಿಜೆಪಿ ಕರ್ನಾಟಕ ಹಿಂದುಳಿದ ವರ್ಗಗಳ ಹವ್ಯಕ ಭವನದಲ್ಲಿ ವಿಶೇಷ ಸಭೆ
ಪಟ್ಟಣದ ಪುರಸಭೆಯಲ್ಲಿ ಹಮ್ಮಿಕೊಂಡಿದ್ದ ಸಾಮಾನ್ಯ ಸಭೆಯಲ್ಲಿ ಒಟ್ಟು 22 ವಿಷಯಗಳ ಕುರಿತು ಚರ್ಚೆ ಮಾಡುವುದಿತ್ತು. ಮೊದಲಿಗೆ ಹಿಂದಿನ ಸಭೆಯ ನಡುವಳಿಕೆಗಳನ್ನು ಓದಿ ಹೇಳುವುದು ಹಾಗೂ ದೃಢೀಕರಿಸುವ ಕುರಿತು ಚರ್ಚೆ ನಡೆದಿತ್ತು.
ಎಲ್ಲ ವಿಷಯಗಳ ಚರ್ಚೆಯ ಬಳಿಕ ಕೊನೆಗೆ ಕಾನೂನು ಸಲಹೆಗಾರರ ಬದಲಾವಣೆಯ ವಿಷಯ ಚರ್ಚೆಯನ್ನು ಸಭೆಯ ಮುಂದೆ ಪ್ರಸ್ತಾಪಿಸುವಂತೆ ಸದಸ್ಯ ವೀರೇಶ ಹಡಲಗೇರಿ ಅಧಿಕಾರಿಗಳಿಗೆ ಸೂಚಿಸಿದರು. ಆಗ ಮಾತನಾಡಿದ ಮುಖ್ಯಾಧಿಕಾರಿ ಗೋಪಾಲ ಕಾಸೆ, ಈ ಹಿಂದಿನ ಸಭೆಯ ಅಜೆಂಡಾದಲ್ಲಿ ಕಾನೂನು ಸಲಹೆಗಾರರ ಬದಲಾವಣೆಯ ವಿಷಯವನ್ನು ಸೇರಿಸಿಲ್ಲ. ಅದರ ಬಗ್ಗೆ ಚರ್ಚೆ ಅಪ್ರಸ್ತುತ ಎಂದರು.
ಇದರಿಂದ ಸಿಟ್ಟಿಗೆದ್ದ ಸದಸ್ಯರು, ಈ ಹಿಂದೆ ಇದ್ದ ಕಾನೂನು ಸಲಹೆಗಾರರನ್ನೇ ಮುಂದುವರೆಸುವಂತೆ ತಮಗೆ ಕಳೆದ ಸಭೆಯಲ್ಲಿ ತಿಳಿಸಲಾಗಿತ್ತು. ಆದರೆ ಆಡಳಿತಾಧಿಕಾರಿಗಳು ಇದ್ದ ವೇಳೆ ಕಾನೂನು ಸಲಹೆಗಾರರನ್ನು ಬದಲಾಯಿಸಿದ್ದೀರಿ. ಈ ಹಿಂದಿನ ಕಾನೂನು ಸಲಹೆಗಾರರನ್ನೇ ನೇಮಿಸಬೇಕು ಎಂಬ ಒತ್ತಾಯವನ್ನು ಮಾಡಿದರು.
ತಕ್ಷಣ ಠರಾವು ಪ್ರತಿಯನ್ನು ಬದಲಾಯಿಸಿ ಕೊಟ್ಟರೆ ಸಭೆಯಲ್ಲಿ ಕೂಡುತ್ತೇವೆ, ಇಲ್ಲದಿದ್ದರೆ ಸಭಾತ್ಯಾಗ ಮಾಡುತ್ತೇವೆ ಎಂದು ಸದಸ್ಯರು ಹೇಳಿದರು. ಕೆಲಕಾಲ ಪುರಸಭೆ ಅಧ್ಯಕ್ಷೆ ಪ್ರತಿಭಾ ಅಂಗಡಗೇರಿ ಹಾಗೂ ಮುಖ್ಯಾಧಿಕಾರಿ ಗೋಪಾಲ ಕಾಸೆ ಸಮಾಲೋಚನೆ ನಡೆಸಿದರಾದರೂ ಸದಸ್ಯರು ಸಭೆ ಬಹಿಷ್ಕರಿಸಿ ಹೊರ ನಡೆದಿದ್ದರು.
ಮುಖ್ಯಾಧಿಕಾರಿ ಗೋಪಾಲ ಕಾಸೆ ಮಾತನಾಡಿ, ಪುರಸಭೆ ಅಧ್ಯಕ್ಷರು ಸೂಚಿಸಿದ ವಿಷಯಗಳಿಗೆ ಮೊದಲೇ ಅನುಮತಿ ಪಡೆದುಕೊಂಡು ಚರ್ಚೆಗೆ ಇಡಲಾಗುತ್ತದೆ. ಇದರಲ್ಲಿ ನಮ್ಮದೇನೂ ತಪ್ಪಿಲ್ಲ ಎಂದು ಸಮಜಾಯಿಷಿ ನೀಡಿದರು. ಸೂಕ್ತ ನಿರ್ಧಾರ ಹೊರಬೀಳದ ಆಡಳಿತ ಪಕ್ಷದ ಸದಸ್ಯರು ಸಭಾತ್ಯಾಗ ಮಾಡಿದರು.