ಮುದ್ದೇಬಿಹಾಳ: ರಾಜ್ಯಾದ್ಯಂತ ಖಾಸಗಿಯಾಗಿ ಕರಾಟೆ ತರಬೇತಿಗಳನ್ನು ಪ್ರಾರಂಭಿಸಲು ಅನುಮತಿ ನೀಡುವಂತೆ ಡಿಸಿಎಂ ಲಕ್ಷ್ಮಣ ಸವದಿ ಅವರಿಗೆ ವಿಜಯಪುರ ಜಿಲ್ಲಾ ಕರಾಟೆ ಅಸೋಷಿಯೇಷನ್ ಪದಾಧಿಕಾರಿಗಳು ಮನವಿ ಪತ್ರ ಸಲ್ಲಿಸಿದರು.
ಮುದ್ದೇಬಿಹಾಳ ಪಟ್ಟಣಕ್ಕೆ ಭೇಟಿ ನೀಡಿದ್ದ ಡಿಸಿಎಂ ಸವದಿ ಅವರನ್ನು ಭೇಟಿಯಾದ ಕರಾಟೆ ತರಬೇತಿದಾರರ ಸಂಘದ ಜಿಲ್ಲಾಧ್ಯಕ್ಷ ಶಿವಕುಮಾರ ಶಾರದಳ್ಳಿ ಅವರು, ಈಗಾಗಲೇ ರಾಜ್ಯ ಸರ್ಕಾರ ಕೋವಿಡ್-19ರ ಅವಧಿಯಲ್ಲಿ ಜಿಮ್ ಮತ್ತು ಯೋಗ ತರಬೇತಿ ಕಾರ್ಯಾಗಾರಗಳನ್ನು ಇದೇ ಆಗಸ್ಟ್ ನಲ್ಲಿ ಪ್ರಾರಂಭಿಸಬಹುದು ಎಂದು ಆದೇಶ ಹೊರಡಿಸಿದ್ದು ಸ್ವಾಗತಾರ್ಹವಾಗಿದೆ. ಅದರಂತೆ ಕರಾಟೆಯೂ ಒಂದು ಕ್ರೀಡೆಯಾಗಿದ್ದು, ಹೆಣ್ಣು ಮಕ್ಕಳಿಗೆ ಆತ್ಮಸ್ಥೈರ್ಯ ತುಂಬುವ ಏಕೈಕ ವಿದ್ಯೆಯಾಗಿದೆ. ಕರಾಟೆಯಿಂದ ದೇಶದಲ್ಲಿ ನಡೆದ ಬಹುತೇಕ ಮಹಿಳಾ ದೌರ್ಜನ್ಯಗಳನ್ನು ತಡೆಗಟ್ಟಬಹುದು ಎಂದು ಸರ್ಕಾರವೇ ಹೇಳಿ, ಕರಾಟೆ ಕ್ರೀಡೆಗೆ ಹೆಚ್ಚಿನ ಮಹತ್ವ ನೀಡಿತ್ತು. ಆದರೆ ಕೋವಿಡ್-19ರ ಅವಧಿಯಲ್ಲಿ ಬಹುತೇಕ ಎಲ್ಲವೂ ಸ್ಥಗಿತಗೊಂಡಿದೆ ಎಂದು ಹೇಳಿದರು.
ಸದ್ಯಕ್ಕೆ ಜಿಮ್ ಮತ್ತು ಯೋಗ ಕಾರ್ಯಾಗಾರಗಳನ್ನು ಪುನಃ ಆರಂಭಿಸಲು ರಾಜ್ಯ ಸರ್ಕಾರ ಹಸಿರು ನಿಶಾನೆ ತೋರಿಸಿದೆ. ಅದರಂತೆ ಕರಾಟೆ ತರಬೇತಿಗೂ ಹಸಿರು ನಿಶಾನೆಯನ್ನು ತೋರಿಸುವ ಮೂಲಕ ಕರಾಟೆ ಕ್ರೀಡೆಯನ್ನೇ ನಂಬಿಕೊಂಡು ಜೀವನ ಸಾಗಿಸುತ್ತಿರುವ ಸಾವಿರಾರು ತರಬೇತುದಾರರಿಗೆ ಅನುಕೂಲ ಮಾಡಿಕೊಡಬೇಕು ಎಂದು ಮನವಿ ಮಾಡಿದರು.