ಮುದ್ದೇಬಿಹಾಳ: ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಂಡಿದೆ. ಇಲ್ಲಿನ ಅಭ್ಯುದಯ ಪಿಯು ಸೈನ್ಸ್ ಕಾಲೇಜಿನ ನಾಲ್ವರು ವಿದ್ಯಾರ್ಥಿಗಳು 600 ಕ್ಕೆ 600 ಅಂಕ ಪಡೆದು ಸಾಧನೆ ಮಾಡಿದ್ದಾರೆ. ಈ ಬಗ್ಗೆ ಮಾತನಾಡಿರುವ ವಿದ್ಯಾರ್ಥಿಗಳು, ಪರೀಕ್ಷೆ ಮೊದಲಿನಂತೆ ನಡೆಸಿದ್ದರೂ ಇಷ್ಟು ಅಂಕ ಗಳಿಸುತ್ತೇವೆ ಎಂಬ ನಂಬಿಕೆ ಇತ್ತು. ಆದರೂ ನಾವು ಟಾಪ್ ರ‍್ಯಾಂಕ್‌ನಲ್ಲಿ ಬಂದಿರುವುದು ಸಂತಸ ತಂದಿದೆ. ಸಂಸ್ಥೆಯವರು ವಿದ್ಯಾರ್ಥಿ ಸ್ನೇಹಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿರುವುದರಿಂದ ಈ ಸಾಧನೆ ಸಾಧ್ಯವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ದ್ವಿತೀಯ ಪಿಯುಸಿ ಪರೀಕ್ಷೆಯನ್ನು ನಡೆಸದೇ ಪಾಸ್ ಮಾಡಿದ್ದಾರೆ ಎಂದು ಮಾತನಾಡಿಕೊಳ್ಳುವವರು ಹೆಚ್ಚಿದ್ದಾರೆ. ಆದರೆ, ನಾವು ಎಸ್.ಎಸ್.ಎಲ್.ಸಿಯಲ್ಲಿ ಶೇ.95ಕ್ಕೂ ಹೆಚ್ಚು ಅಂಕ ಗಳಿಸಿ ಉತ್ತೀರ್ಣರಾಗಿದ್ದೇವೆ. ಸರ್ಕಾರಿ ಶಾಲೆಯಲ್ಲಿ ಕಲಿತ ಮಕ್ಕಳು ಬುದ್ಧಿವಂತರಿರುವುದಿಲ್ಲ ಎನ್ನುವುದಕ್ಕೆ ನಾವೇ ಅಪವಾದ. ಕೋವಿಡ್ ಸಂದರ್ಭದಲ್ಲಿ ಪರೀಕ್ಷೆ ನಡೆಸದಿದ್ದರೂ ಹಿಂದೆ ಗಳಿಸಿದ ಅಂಕಗಳ ಆಧಾರದ ಮೇಲೆ ನಮ್ಮನ್ನು ಉತ್ತೀರ್ಣ ಮಾಡಿದ್ದಾರೆ.
ನಮ್ಮ ಕಾಲೇಜಿನ ನಾಲ್ವರು ವಿದ್ಯಾರ್ಥಿಗಳು ನೂರಕ್ಕೆ ನೂರು ಅಂಕ ಗಳಿಸಿರುವುದು ಸಹಜವಾಗಿಯೇ ಖುಷಿ ಉಂಟು ಮಾಡಿದೆ ಎಂದು ಅಭ್ಯುದಯ ಪಿ.ಯು. ಸೈನ್ಸ್ ಕಾಲೇಜಿನ ವಿದ್ಯಾರ್ಥಿನಿ ಬಸಮ್ಮ ಇಂಗಳಗಿ ಹಾಗೂ ರಕ್ಷಿತಾ ಬಿರಾದಾರ ಹೇಳಿರು.
ಈ ಸಂದರ್ಭದಲ್ಲಿ ಕಾಲೇಜಿನ ಉಪನ್ಯಾಸಕ ಸದಾಶಿವ ಬೆಳ್ಳಿಕಟ್ಟಿ, ಸಂಸ್ಥೆಯ ನಿರ್ದೇಶಕಿ ಶ್ರೀದೇವಿ ಮದರಿ, ಸದಸ್ಯ ರವಿ ಜಗಲಿ, ಕಿರಣ್ ಮದರಿ, ಚಂದ್ರು ಜೋಗಿ, ಬಸವರಾಜ ಗೂಡ್ಲಮನಿ ಮೊದಲಾದವರು ವಿದ್ಯಾರ್ಥಿಗಳಿಗೆ ಸಿಹಿ ಹಂಚಿ ಸಂಭ್ರಮಿಸಿದರು.
ನಾಲ್ವರು ವಿದ್ಯಾರ್ಥಿಗಳಿಗೆ 100ಕ್ಕೆ ನೂರು ಅಂಕ:
ಮುದ್ದೇಬಿಹಾಳ ಪಟ್ಟಣದ ಅಭ್ಯುದಯ ಪಿಯು ಸೈನ್ಸ್ ಕಾಲೇಜಿನ ನಾಲ್ವರು ವಿದ್ಯಾರ್ಥಿಗಳು ದ್ವಿತೀಯ ಪಿಯು ಸೈನ್ಸ್ ವಿಭಾಗದಲ್ಲಿ ನೂರಕ್ಕೆ ನೂರು ಅಂಕಗಳನ್ನು ಗಳಿಸಿ ಕಾಲೇಜಿಗೆ ಕೀರ್ತಿ ತಂದಿದ್ದಾರೆ. ವಿದ್ಯಾರ್ಥಿಗಳಾದ ರಕ್ಷಿತಾ ಬಿರಾದಾರ, ಬಸಮ್ಮ ಇಂಗಳಗಿ, ಹರ್ಷಿತಾ ಬಿರಾದಾರ, ಬಿಬಿ ಆಯೇಷಾ ಬಾಗವಾನ 600ಕ್ಕೆ 600 ಅಂಕ ಪಡೆದು ರಾಜ್ಯಕ್ಕೆ ಮೊದಲ ಸ್ಥಾನ ಗಳಿಸಿದ ವಿದ್ಯಾರ್ಥಿಗಳ ಸಾಲಿನಲ್ಲಿ ಸ್ಥಾನ ಪಡೆದಿದ್ದಾರೆ.
ಇದನ್ನೂ ಓದಿ:ಕೊಡವ ಸಮುದಾಯಕ್ಕೆ ST ಸ್ಥಾನಮಾನ ನೀಡುವ ಕುರಿತ ಅಧ್ಯಯನ ವರದಿ ಪರಿಶೀಲಿಸಿ: ಹೈಕೋರ್ಟ್
ಕಾಲೇಜಿನ ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಅಧ್ಯಕ್ಷ ಎನ್.ಎಸ್. ಪೂಜಾರಿ, ಕಾರ್ಯದರ್ಶಿ ಎಂ.ಎನ್.ಮದರಿ, ನಿರ್ದೇಶಕಿ ಶ್ರೀದೇವಿ ಮದರಿ ಹಾಗೂ ಕಾಲೇಜಿನ ಬೋಧಕ ಬೋಧಕೇತರ ಸಿಬ್ಬಂದಿ ಅಭಿನಂದಿಸಿದ್ದಾರೆ.
SSLC ಪರೀಕ್ಷೆಯಲ್ಲಿ ಮೊದಲನೇ ಸ್ಥಾನ ಪಡೆದಿದ್ರು:
ಎರಡು ವರ್ಷಗಳ ಹಿಂದೆ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ನಾಲ್ಕನೇ ಸ್ಥಾನ ಪಡೆದಿದ್ದ ವಿದ್ಯಾರ್ಥಿನಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲೂ ರಾಜ್ಯಕ್ಕೆ ಮೊದಲನೇ ಸ್ಥಾನ ಪಡೆಯುವ ಮೂಲಕ ವಿಶೇಷ ಸಾಧನೆ ತೋರಿದ್ದಾಳೆ.
ತಾಲೂಕಿನ ನಾಗರಬೆಟ್ಟದ ಎಸ್.ಡಿ.ಕೆ ಶಿಕ್ಷಣ ಸಂಸ್ಥೆಯ ಎಕ್ಸ್ಪರ್ಟ್ ಪಿ.ಯು ಸೈನ್ಸ್ ಕಾಲೇಜಿನ ವಿದ್ಯಾರ್ಥಿನಿ ಲಕ್ಷ್ಮೀ ಗುರಿಕಾರ 600ಕ್ಕೆ 600 ಅಂಕ ಗಳಿಸಿದ ವಿದ್ಯಾರ್ಥಿನಿಯಾಗಿದ್ದಾಳೆ. ಕಾಲೇಜಿಗೆ ದ್ವಿತೀಯ ಸ್ಥಾನವನ್ನು ಅಶ್ವಿನಿ ಆಲಾಳಮಠ 598/600 (99.66%), ತೃತೀಯ ಮಾಳಮ್ಮ ಮುರಾಳ 597/600(99.5%) ಪಡೆದಿದ್ದಾರೆ.ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಅಧ್ಯಕ್ಷ ಬಿ.ಜಿ.ಮಠ ಅಭಿನಂದಿಸಿದ್ದಾರೆ.