ಮುದ್ದೇಬಿಹಾಳ(ವಿಜಯಪುರ): ಸಮಾಜಸೇವೆ ಮಾಡುತ್ತಿರುವ ತಮಿಳುನಾಡಿನ ಮದುರೈನ ಕ್ಷೌರಿಕರೊಬ್ಬರ 13 ವರ್ಷದ ಮಗಳು ಬಡವರಿಗಾಗಿ ‘ವಿಶ್ವಸಂಸ್ಥೆಯ ಸದ್ಭಾವನಾ ರಾಯಭಾರಿ’ ಆಗಿ ನೇಮಕಗೊಂಡಿದ್ದಾಳೆ. ಬಾಲಕಿಯ ಈ ಕಾರ್ಯಕ್ಕೆ ತಾಲೂಕಿನ ಸವಿತಾ ಸಮಾಜದ ಸದಸ್ಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಮಧುರೈನಲ್ಲಿ ಕ್ಷೌರಿಕ ವೃತ್ತಿಯನ್ನು ಮಾಡುತ್ತಿರುವ ಸಿ. ಮೋಹನ್ ಅವರ ಪುತ್ರಿ ಎಂ. ನೇತ್ರಾ ಎಂಬ ಬಾಲಕಿ ತನ್ನ ವಿದ್ಯಾಭ್ಯಾಸಕ್ಕೆಂದು ಕೂಡಿಟ್ಟಿದ್ದ ಸುಮಾರು 5 ಲಕ್ಷ ರೂ. ಹಣದಿಂದ ಕೊರೊನಾ ಲಾಕ್ ಡೌನ್ ನಲ್ಲಿ ಸಿಲುಕಿದ್ದ 900 ಬಡ ಜನರಿಗೆ ಅಗತ್ಯ ವಸ್ತುಗಳನ್ನು ನೀಡಿ ಸಹಾಯ ಮಾಡಿದ್ದಳು. ಇದಕ್ಕೆ ಇವರ ತಂದೆ ಆದಾಯವಿಲ್ಲದಿದ್ದರೂ ಮಗಳ ಕಾರ್ಯಕ್ಕೆ ಪ್ರೋತ್ಸಾಹ ನೀಡಿದ್ದರು.
ವಿಶ್ವಸಂಸ್ಥೆ ವಿಭಾಗವಾದ ‘ಶಾಂತಿ ಹಾಗೂ ಅಭಿವೃದ್ಧಿ ಕುರಿತಾದ ವಿಸ್ವಸಂಸ್ಥೆ ಅಸೋಸಿಯೇಷನ್’, ಬಾಲಕಿಯ ಸಾಧನೆಯನ್ನು ಗುರುತಿಸಿ ಆಯ್ಕೆ ಮಾಡಿದೆ. ಇದರೊಂದಿಗೆ ವಿಶ್ವಸಂಸ್ಥೆ ನ್ಯೂಯಾರ್ಕ್ ಹಾಗೂ ಜಿನೇವಾದಲ್ಲಿ ನಡೆಸಲಿರುವ ಸಮ್ಮೇಳನದಲ್ಲಿ ವಿಶ್ವನಾಯಕರ ಮುಂದೆ ಈಕೆ ಭಾಷಣ ಮಾಡುವ ಅವಕಾಶವನ್ನೂ ಪಡೆದುಕೊಂಡಿದ್ದಾಳೆ. ಈಕೆಗೆ 1 ಲಕ್ಷ ರೂಪಾಯಿ ಶಿಷ್ಯವೇತನ ಸಿಗಲಿದೆ.
ಈ ಬಗ್ಗೆ ಪ್ರಧಾನಿ ಮೋದಿಯವರು ಮನ್ ಕೀ ಬಾತ್ ಕಾರ್ಯಕ್ರಮದಲ್ಲೂ ಸಹ ನೇತ್ರಾ ಮತ್ತು ಆಕೆಯ ತಂದೆ ಮೋಹನ್ ಕುರಿತು ಶ್ಲಾಘನೆ ವ್ಯಕ್ತಪಡಿಸಿದ್ದರು ಎಂದು ಸವಿತಾ ಸಮಾಜದ ತಾಲೂಕು ಅಧ್ಯಕ್ಷ ರವಿ ತೇಲಂಗಿ ಹೇಳಿದರು.