ಮುದ್ದೇಬಿಹಾಳ ( ವಿಜಯಪುರ) : ಭಾರತೀಯ ಲೆಕ್ಕಪರಿಶೋಧಕರ ಮಂಡಳಿ ನಡೆಸುವ ಚಾರ್ಟರ್ಡ್ ಅಕೌಂಟೆಂಟ್ (ಸಿಎ) ಪರೀಕ್ಷೆಯನ್ನು ತಾಲೂಕಿನ ನಾಲತವಾಡ ಪಟ್ಟಣದ ಪದವೀಧರ ಅರವಿಂದಕುಮಾರ ಡಿಗ್ಗಿ ಉತ್ತೀರ್ಣರಾಗುವ ಮೂಲಕ ತಾಲೂಕಿಗೆ ಕೀರ್ತಿ ತಂದಿದ್ದಾರೆ.
ಅಪ್ಪಟ ಗ್ರಾಮೀಣ ಪ್ರದೇಶದ ಸರ್ಕಾರಿ ಕನ್ನಡ ಶಾಲೆಯ ಪ್ರತಿಭಾವಂತ ವಿದ್ಯಾರ್ಥಿಯಾಗಿರುವ ಅರವಿಂದಕುಮಾರ ಕೃಷಿಕ ಕುಟುಂಬದಲ್ಲಿ ಹುಟ್ಟಿ ಬೆಳೆದವರು. ಬಾಲ್ಯದಲ್ಲೇ ತಾಯಿಯನ್ನು ಕಳೆದುಕೊಂಡ ಇವರಿಗೆ ತಂದೆ ಗುರುನಾಥ ಡಿಗ್ಗಿ ಅವರು ತಾಯಿ ಇಲ್ಲದ ಕೊರತೆಯನ್ನು ತುಂಬಿ ಮಗನಿಗೆ ಶಿಕ್ಷಣ ಕೊಡಿಸಿದ್ದಾರೆ.
ಅರವಿಂದಕುಮಾರ ಪಿಯುಸಿ ಸೈನ್ಸ್ ಫೇಲಾದಾಗ ನೆರೆಹೊರೆಯವರು, ಸ್ನೇಹಿತರ ಹಿಯಾಳಿಕೆಯ ಮಾತುಗಳನ್ನೇ ಗಂಭೀರವಾಗಿ ಪರಿಗಣಿಸಿ ಸಾಧನೆಯ ಮಟ್ಟಿಲನ್ನಾಗಿಸಿ ಮುನ್ನಡೆದಿದ್ದಾರೆ.
ಈ ಕುರಿತ ಮಾದ್ಯಮಗಳೊಂದಿಗೆ ಮಾತನಾಡಿದ ಅರವಿಂದಕುಮಾರ ಡಿಗ್ಗಿ, ಪಿಯುಸಿ ಸೈನ್ಸ್ ನಲ್ಲಿ ಫೇಲಾಗಿದ್ದ ನನಗೆ ಮುಂದೇನು ಮಾಡಬೇಕು ಎಂದು ಕೈ ಕಟ್ಟಿ ಕೂರದೇ ಸತತ ಪರಿಶ್ರಮದಿಂದ ಈ ಸಾಧನೆ ಸಾಧ್ಯವಾಗಿದೆ. ಮುದ್ದೇಬಿಹಾಳ ತಾಲೂಕಿನಲ್ಲಿ ಸಿ.ಎ. ಪರೀಕ್ಷೆಯನ್ನು ಹಲವರು ಬರೆದಿದ್ದಾರೆ. ಆದರೆ ತಾಲೂಕಿನಲ್ಲೇ ಪ್ರಥಮ ಬಾರಿಗೆ ಪಾಸಾಗಿರುವುದು ಖುಷಿ ತಂದಿದೆ. ಸಾಧನೆಗೆ ನನ್ನ ಕುಟುಂಬದ ಪ್ರೋತ್ಸಾಹ, ಸ್ನೇಹಿತರ ಸಹಕಾರ, ದೇವರ ಕೃಪೆ, ನನ್ನ ಶಿಕ್ಷಕರ ಮಾರ್ಗದರ್ಶನ ಕಾರಣ ಎಂದು ಸಾಧಕ ಡಿಗ್ಗಿ ಹೇಳಿದರು.
'ನನ್ನ ಮಗ ಚಿಕ್ಕವನಿದ್ದಾಗ ಹಸು, ಎಮ್ಮೆ ಮೇಯಿಸುತ್ತಿದ್ದ. ಪಿಯುಸಿ ಫೇಲಾದಾಗ ಎಲ್ಲರೂ ಇವನನ್ನು ಗೇಲಿ ಮಾಡಿದ್ದರು. ಇದೀಗ ನನ್ನ ಮಗ ಸಾಧನೆಯ ಉತ್ತುಂಗಕ್ಕೇರಿದ್ದಾನೆ. ಅವನೊಬ್ಬ ಒಳ್ಳೆಯ, ಪ್ರಾಮಾಣಿಕ ಅಧಿಕಾರಿಯಾಗುತ್ತಾನೆ ಎಂಬ ವಿಶ್ವಾಸ ನನ್ನದು ಎಂದು ಅರವಿಂದಕುಮಾರನ ತಂದೆ ಗುರುನಾಥ ಡಿಗ್ಗಿ ಖುಷಿ ಹಂಚಿಕೊಂಡಿದ್ದಾರೆ.
ಒಟ್ಟಿನಲ್ಲಿ ಅರವಿಂದಕುಮಾರ ಡಿಗ್ಗಿ ಚಾರ್ಟರ್ಡ್ ಅಕೌಂಟೆಂಟ್ನಲ್ಲಿ ಪಾಸ್ ಆಗಿ ತಾಲೂಕಿಗೆ ಕೀರ್ತಿ ತಂದಿರುವುದು ಗ್ರಾಮದ ಜನತೆಗೆ ಸಂತಸ ತಂದಿದೆ.