ಮುದ್ದೇಬಿಹಾಳ : ವಾರಕ್ಕೆರಡು ಬಾರಿ ಡಯಾಲಿಸಿಸ್ ಮಾಡಿಸಿಕೊಳ್ಳಲೇಬೇಕಾದ ಅನಿವಾರ್ಯತೆಯಲ್ಲಿರುವ ರೋಗಿಗಳು, ಡಯಾಲಿಸಿಸ್ ಘಟಕಕ್ಕೆ ಅಗತ್ಯ ವೈದ್ಯಕೀಯ ಪರಿಕರ ಪೂರೈಕೆ ಸ್ಥಗಿತಗೊಂಡಿರುವ ಪರಿಣಾಮ ತೀವ್ರ ಸಂಕಷ್ಟ ಎದುರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.
ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿರುವ ಡಯಾಲಿಸಿಸ್ ಘಟಕದಲ್ಲಿ ದಾಖಲಾಗಿರುವ ರೋಗಿಗಳು ವಾರಕ್ಕೆರಡು ಬಾರಿ ಡಯಾಲಿಸಿಸ್ ಮಾಡಿಸಿಕೊಳ್ಳಬೇಕು. ಆದರೆ, ಸದ್ಯದ ಪರಿಸ್ಥಿತಿಯಲ್ಲಿ ಬಿಆರ್‌ಎಸ್ ಸಂಸ್ಥೆ ಡಯಾಲಿಸಿಸ್ ನಿರ್ವಹಣೆಯಿಂದ ಹಿಂದೆ ಸರಿದಿದೆ.
ಕಳೆದ ಮೂರು ತಿಂಗಳಿoದ ಡಯಾಲಿಸಿಸ್ ನಡೆಸಲು ಅಗತ್ಯ ಔಷಧ ಮತ್ತು ಪರಿಕರ ಪೂರೈಕೆ ಆಗುತ್ತಿಲ್ಲ. ಹೀಗಾಗಿ, ಎಲ್ಲಾ ಔಷಧಗಳನ್ನು ರೋಗಿಗಳೇ ಖರೀದಿಸುವ ಅನಿವಾರ್ಯತೆ ಎದುರಾಗಿದೆ. ಅಲ್ಲದೇ ಹಣ ಕೊಟ್ಟರೂ ಔಷಧಿ ತಕ್ಷಣಕ್ಕೆ ಎಲ್ಲಿಯೂ ಸಿಗದ ಕಾರಣ ಸಾವು ಬದುಕಿನ ಮಧ್ಯೆ ಬಡರೋಗಿಗಳು ಒದ್ದಾಡುತ್ತಿದ್ದಾರೆ.
ಡಯಾಲಿಸಿಸ್ ಯೂನಿಟ್ ನಿರ್ವಹಣೆ ಏನು,ಎತ್ತ : 2017 ರಿಂದ ಐದು ವರ್ಷದವರೆಗೆ ಗುತ್ತಿಗೆ ಆಧಾರದಲ್ಲಿ ರಾಜ್ಯದ 23 ಜಿಲ್ಲೆಗಳ 123 ಆಸ್ಪತ್ರೆಗಳಲ್ಲಿ ಡಯಾಲಿಸಿಸ್ ಯೂನಿಟ್ ನಡೆಸಲು ಬಿಆರ್‌ಎಸ್ ಸಂಸ್ಥೆ ಗುತ್ತಿಗೆ ಪಡೆದುಕೊಂಡಿತ್ತು. ಫೆ.23ರಿಂದ ಈಚೆಗೆ ಡಯಾಲಿಸಿಸ್ ಯೂನಿಟ್‌ಗಳಿಗೆ ಈ ಸಂಸ್ಥೆಯಿoದ ಒಂದೇ ಒಂದು ಗ್ಲೌಸ್,ಮಾಸ್ಕ್ ಹಾಗೂ ಔಷಧಿ ಪೂರೈಕೆ ಆಗಿಲ್ಲ. ಸರ್ಕಾರವೇ 23 ಕೋಟಿ ರೂ. ಬಾಕಿ ಉಳಿಸಿಕೊಂಡಿರುವ ಕಾರಣ ಬಿಆರ್‌ಎಸ್ ಸಂಸ್ಥೆ ನಿರ್ವಹಣೆಯಿಂದ ಹಿಂದೆ ಸರಿದಿದೆ ಎನ್ನಲಾಗುತ್ತಿದೆ.
ಆಯುಕ್ತರು ಔಷಧ ಸಾಮಗ್ರಿ ಪೂರೈಸಲು ಆದೇಶಿಸಿದರೂ ಬಾರದ ಸಾಮಗ್ರಿ : ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯುಕ್ತರು ಡಯಾಲಿಸಿಸ್ ಘಟಕಕ್ಕೆ ಬೇಕಾಗುವ ಸಾಮಗ್ರಿಗಳನ್ನು ಪೂರೈಸಲು ಆದೇಶಿಸಿದ್ದಾರೆ.
ಆದರೆ, ವಿಜಯಪುರ ಜಿಲ್ಲಾ ಶಸ್ತ್ರಚಿಕಿತ್ಸಕರು ಬರೆದಿರುವ ಪತ್ರದಲ್ಲಿ ಡಯಾಲಿಸಿಸ್ ಘಟಕ ವಿಜಯಪುರ ಘಟಕಕ್ಕೆ ಮಾತ್ರ ಅಗತ್ಯ ಔಷಧಿಗಳನ್ನು ಬೇಡಿಕೆಯಂತೆ ಪೂರೈಸುವಂತೆ ಸೂಚಿಸಿರುವುದು ತಾಲೂಕು ಮಟ್ಟದ ಆಸ್ಪತ್ರೆಗಳ ಘಟಕಕ್ಕೆ ಔಷಧಿಗಳು ಅಲಭ್ಯವಾದಂತಾಗಿವೆ.
ಈ ಬಗ್ಗೆ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಅವರ ಗಮನಕ್ಕೆ ತಂದಿದ್ದು ಅವರು ಸಂಬoಧಿಸಿದ ಇಲಾಖೆಯ ಅಧಿಕಾರಿಗಳೊಂದಿಗೆ ಮಾತನಾಡುವುದಾಗಿ ತಿಳಿಸಿದ್ದಾರೆ ಎನ್ನುತ್ತಾರೆ ಡಯಾಲಿಸಿಸ್ ಘಟಕದ ಸಿಬ್ಬಂದಿ.
ಸಿಬ್ಬoದಿಯ ಸಂಬಳದ ಬಗ್ಗೆ ಉಲ್ಲೇಖವಿಲ್ಲ: ಕಳೆದ ಮೂರು ತಿಂಗಳಿನಿಂದ ಸಂಬಳವಿಲ್ಲದೇ ಕೆಲಸ ಮಾಡುತ್ತಿರುವ ಡಯಾಲಿಸಿಸ್ ಘಟಕದ ಸಿಬ್ಬಂದಿ ತೊಂದರೆಯಲ್ಲಿದ್ದಾರೆ. ತಕ್ಷಣಕ್ಕೆ ಇಂದಿನ ಸಂದರ್ಭದಲ್ಲಿ ನಮಗೆ ಯಾರು ಸಹಾಯಕ್ಕೆ ಬರುತ್ತಾರೆ, ಸರ್ಕಾರವೇ ಆಸರೆಯಾಗಬೇಕು ಎಂದು ಗುತ್ತಿಗೆ ಸಿಬ್ಬಂದಿ ಅಳಲು ತೋಡಿಕೊಂಡಿದ್ದಾರೆ.
ಕೋವಿಡ್ ವಾರ್ಡ್ ಪಕ್ಕದಲ್ಲೇ ಡಯಾಲಿಸಿಸ್ ಘಟಕ : ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಘಟಕ ಪಕ್ಕದಲ್ಲೇ ಕೋವಿಡ್ ಸೋಂಕಿತರ ವಾರ್ಡ್ ಇದೆ. ಇದರಿಂದಾಗಿ ಕಳೆದ ತಿಂಗಳು ಇಲ್ಲಿಯ ಮೂವರಿಗೆ ಪಾಸಿಟಿವ್ ಸೋಂಕು ಕಾಣಿಸಿಕೊಂಡು ಗುಣಮುಖವಾದ ಬಳಿಕ ಮತ್ತೆ ಕೆಲಸಕ್ಕೆ ಹಾಜರಾಗಿದ್ದಾರೆ.
ಆಸ್ಪತ್ರೆಯಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಾಗಿರುವುದರಿಂದ ಅಂಗೈಯಲ್ಲಿ ಜೀವ ಹಿಡಿದು ಕೆಲಸ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ. ಒಂದೆಡೆ ಕಂಪನಿ ಕಡೆಯಿಂದ ಯಾವುದೇ ಸೌಲಭ್ಯ ಬೇರೆ ದೊರೆಯುತ್ತಿಲ್ಲ.
ಇನ್ನೊಂದೆಡೆ ಸರ್ಕಾರಿ ಆಸ್ಪತ್ರೆಯ ಅಧಿಕಾರಿಗಳು ನಿಮ್ಮ ಕಂಪನಿಯವರಿಗೆ ಕೇಳಿ ಎಂದು ಹೇಳುತ್ತಾರೆ. ಈ ಯೂನಿಟ್ ನಂಬಿಕೊಂಡು ರಾಜ್ಯಾದ್ಯಂತ 700 ನೌಕರರ ಭವಿಷ್ಯ ಅತಂತ್ರದಲ್ಲಿದೆ. ವೇತನದ ಗ್ಯಾರಂಟಿಯೂ ಇಲ್ಲ.
ಬಿಆರ್‌ಎಸ್ ಕಂಪನಿ ಹಿಂದೆ ಸರಿದಿರುವುದರಿಂದ ಕೆಲಸದ ಭದ್ರತೆಯೂ ಇಲ್ಲದೇ ತೊಳಲಾಟದಲ್ಲಿ ಸಿಲುಕಿಕೊಂಡಿದ್ದೇವೆ ಎಂದು ಡಯಾಲಿಸಿಸ್ ಘಟಕದ ನಿರ್ವಾಹಕ ಸಂತೋಷ ಮದಳೆ ತಿಳಿಸುತ್ತಾರೆ.