ವಿಜಯಪುರ: ನಗರದಲ್ಲಿ ಪೊಲೀಸರಿಂದ ಲಾಠಿ ಏಟು ತಿಂದ ಕಾರು ಚಾಲಕ ಇಂದು ನ್ಯಾಯಾಲಯಕ್ಕೆ ದಂಡ ಕಟ್ಟಿ ಪೊಲೀಸರಿಗೆ ಲಿಖಿತ ರೂಪದಲ್ಲಿ ಕ್ಷಮೆ ಕೇಳಿದ್ದಾನೆ.
ವಿಜಯಪುರ ಜಿಲ್ಲೆಯ ಸಿಂದಗಿ ಜಿಒಸಿಸಿ ಬ್ಯಾಂಕಿನಲ್ಲಿ ಜ್ಯೂನಿಯರ್ ಅಸಿಸ್ಟಂಟ್ ಆಗಿರುವ ಬಸವರಾಜ ಶಾಂತಯ್ಯ ಕರಜಗಿ ನಿನ್ನೆ ಗಾಂಧಿ ಚೌಕದಲ್ಲಿ ಪೊಲೀಸರು ಕಾರು ತಡೆಯಲು ಯತ್ನಿಸಿದಾಗ ಸಿಬ್ಬಂದಿಯ ಮೇಲೆ ಕಾರು ಹತ್ತಿಸಲು ಹೋಗಿ ಬೆತ್ತದ ರುಚಿ ತಿಂದಿದ್ದ. ನಂತರ ಬಸವೇಶ್ವರ ಸರ್ಕಲ್ನಲ್ಲಿ ತಡೆದಿದ್ದ ಪೊಲೀಸರು ಕಾರು ಚಾಲಕ ಬಸವರಾಜ ಕರಜಗಿಗೆ ಲಾಠಿ ಏಟು ನೀಡಿದ್ದರು. ಈ ವಿಡಿಯೋ ಸಾಮಾಜಿಕ ತಾಣದಲ್ಲಿ ವೈರಲ್ ಆಗಿತ್ತು.
ಆರೋಪಿಯನ್ನು ಬಂಧಿಸಿ ಪೊಲೀಸರು ಬ್ರೀಥ್ ಅನಲೈಸ್ ಮಾಡಿಸಿದ್ದರು. ಈ ವೇಳೆ ಮದ್ಯ ಸೇವನೆ ಮಾಡಿದ್ದು ಬೆಳಕಿಗೆ ಬಂದಿತ್ತು. ಇಂದು ವಿಜಯಪುರ ನ್ಯಾಯಾಲಯಕ್ಕೆ ತೆರಳಿ ಕಾರು ಚಾಲಕ ರೂ. 10,100 ದಂಡ ಪಾವತಿಸಿದ್ದಾನೆ.
ನಿನ್ನೆ ತನ್ನ ಕಾರಿನಲ್ಲಿ ಗಾಂಧಿ ಚೌಕದಿಂದ ಬಸವರಾಜ ಕರಜಗಿ ಹೊರಟಿದ್ದ. ತಪಾಸಣೆಗೆ ಕಾರು ತಡೆಯಲು ಯತ್ನಿಸಿದ ಪೊಲೀಸರ ಮೇಲೆಯೇ ಕಾರು ನುಗ್ಗಿಸಲು ಯತ್ನಿಸಿದ್ದ. ಪೊಲೀಸರು ಬಸವೇಶ್ವರ ಚೌಕದ ಬಳಿ ಆತನ ಕಾರನ್ನು ತಡೆದು ಕೆಳಗಿ ಇಳಿಸಿ ಲಾಠಿ ರುಚಿ ತೋರಿಸಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಬಳಿಕ ಆತನನ್ನು ಪೊಲೀಸರು ತಪಾಸಣೆ ನಡೆಸಿದಾಗ ಮದ್ಯ ಸೇವಿಸಿದ್ದು ಪತ್ತೆಯಾಗಿದ್ದು, ಆತನ ವಿರುದ್ಧ ವಿಜಯಪುರ ಪೊಲೀಸರು ಕೇಸ್ ದಾಖಲಿಸಿದ್ದರು.
ಇಂದು ನ್ಯಾಯಾಲಯಕ್ಕೆ ಹಾಜರಾದ ಆರೋಪಿ ಬಸವರಾಜ ಕರಜಗಿ 10,100 ರೂ. ದಂಡ ಪಾವತಿಸಿದ್ದಾನೆ. ಅಲ್ಲದೇ, ಪೊಲೀಸರಿಗೆ ಕ್ಷಮೆ ಕೋರಿ ಲಿಖಿತವಾಗಿ ಪತ್ರ ಬರೆದಿದ್ದಾನೆ. ನಿನ್ನೆ ಪೊಲೀಸರು ತಪಾಸಣೆಗೆ ತಡೆದಾಗ ತಾನು ಮದ್ಯ ಸೇವಿಸಿದ ಹಿನ್ನೆಲೆ ಕಾರನ್ನು ನಿಲ್ಲಿಸದೇ ಹೊರಟಿದ್ದೆ.
ನಂತರ ಬಸವೇಶ್ವರ ಸರ್ಕಲ್ನಲ್ಲಿ ಕಾರನ್ನು ತಡೆದಾಗ ಮದ್ಯದ ನಶೆಯಲ್ಲಿ ಪೊಲೀಸರೊಂದಿಗೆ ಅಸಭ್ಯವಾಗಿ ವರ್ತಿಸಿದ್ದೇನೆ. ಈ ಹಿನ್ನೆಲೆ ಪೊಲೀಸರು ಬ್ರೀಥ್ ಅನಲೈಸರ್ ಮೂಲಕ ಪರೀಕ್ಷೆ ಮಾಡಿದ್ದರು. ಸಾರಾಯಿ ಸೇವಿಸಿದ್ದು ದೃಢಪಟ್ಟ ಹಿನ್ನೆಲೆ ನ್ಯಾಯಾಲಯಕ್ಕೆ ಹೋಗಿ ದಂಡ ಕಟ್ಟಿ ಬಂದಿದ್ದೇನೆ. ಸಾರಾಯಿ ಕುಡಿದ ಅಮಲಿನಲ್ಲಿ ಪೊಲೀಸರೊಂದಿಗೆ ಅಸಭ್ಯವಾಗಿ ವರ್ತಿಸಿದ್ದಕ್ಕೆ ಕ್ಷಮೆಯಾಚಿಸುತ್ತೇನೆ ಎಂದು ಲಿಖಿತ ರೂಪದಲ್ಲಿ ಕ್ಷಮೇ ಕೇಳಿದ್ದಾನೆ.
ಇನ್ನು ಮುಂದೆ ನಡವಳಿಕೆಯನ್ನು ತಿದ್ದಿಕೊಂಡು ಒಳ್ಳೆಯ ಜೀವನ ಸಾಗಿಸುತ್ತೇನೆ ಎಂದು ಕ್ಷಮಾಪಣಾ ಪತ್ರದಲ್ಲಿ ಬರೆದಿದ್ದಾನೆ. ಒಂದು ವೇಳೆ ತನ್ನ ವರ್ತನೆ ಇದೇ ರೀತಿ ಮುಂದುವರೆದರೆ ಪೊಲೀಸರು ಕಾನೂನು ಪ್ರಕಾರ ಕ್ರಮ ಕೈಗೊಳ್ಳಬಹುದಾಗಿದೆ ಎಂದು ಗಾಂಧಿ ಚೌಕ್ ಪೊಲೀಸರಿಗೆ ಪತ್ರ ಬರೆದು ಬಸವರಾಜ ಕರಜಗಿ ಕ್ಷಮೆಯಾಚಿಸಿದ್ದಾನೆ.