ವಿಜಯಪುರ : ಉಕ್ರೇನ್ ಮೇಲೆ ರಷ್ಯಾ ಕೈಗೊಂಡಿರುವ ಮಿಲಿಟರಿ ಕಾರ್ಯಾಚರಣೆ ಎರಡನೇ ದಿನಕ್ಕೆ ಕಾಲಿಟ್ಟಿದ್ದು, ಪರಿಸ್ಥಿತಿ ಉದ್ವಿಗ್ನಗೊಂಡಿದೆ. ಅಲ್ಲಿ ವಿದ್ಯಾರ್ಥಿಗಳು ಸೇರಿ ಭಾರತೀಯ ಪ್ರಜೆಗಳು ತೀವ್ರ ಸಂಕಷ್ಟದಲ್ಲಿದ್ದು, ರಾಜ್ಯದಲ್ಲಿರುವ ಅವರ ಕುಟುಂಬಸ್ಥರು ಆತಂಕಕ್ಕೊಳಗಾಗಿದ್ದಾರೆ.
ಉಕ್ರೇನ್ನಲ್ಲಿ ಎಂಬಿಬಿಎಸ್ ವಿದ್ಯಾಭ್ಯಾಸ ಮಾಡಲು ಹೋಗಿದ್ದ ವಿದ್ಯಾರ್ಥಿಗಳ ಪೈಕಿ ವಿಜಯಪುರ ಜಿಲ್ಲೆಯ 20ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇದ್ದಾರೆ. ದರ್ಗಾ ಜೈಲ್ ರಸ್ತೆಯ ಲಿಂಗೇಶ್ವರ ನಗರದ ರಾಜೇಂದ್ರ ಹಾಗೂ ರಾಜೇಶ್ವರಿ ಪಾಟೀಲ ಹಿರಿಯ ಮಗ ರೋಹನ್ ಪಾಟೀಲ ಎಂಬುವರು ಉಕ್ರೇನ್ ದೇಶದ ಜಾಪ್ರೋಜಾ ವೈದ್ಯಕೀಯ ಕಾಲೇಜ್ನಲ್ಲಿ 3ನೇ ಸೆಮಿಸ್ಟರ್ನ ವ್ಯಾಸಂಗ ಮಾಡುತ್ತಿದ್ದರು.
ಉಕ್ರೇನ್ನಲ್ಲಿ ಯುದ್ಧ ಭೀತಿ ವಾತಾವರಣ ನಿರ್ಮಾಣವಾದ ಕಾರಣ ಫೆಬ್ರವರಿ 24ರಂದು ವಿಮಾನದ ಟಿಕೆಟ್ ಬುಕ್ ಮಾಡಿದ್ದರು. ಆದರೆ, ಸದ್ಯ ವಿಮಾನ ರದ್ದಾದ ಕಾರಣ ವಿದ್ಯಾರ್ಥಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಇವರು ವಾಸಿಸುವ ಸ್ಥಳದಲ್ಲಿ ನಿನ್ನೆಯವರೆಗೆ ಯಾವುದೇ ಯುದ್ಧದ ವಾತಾವರಣ ಕಂಡು ಬಂದಿರಲಿಲ್ಲ. ಆದರೆ, ರಾತ್ರಿ ಬಾಂಬ್ ಸ್ಫೋಟದ ಸದ್ದುಗಳು ಕೇಳಿ ಬಂದ ಕಾರಣ ಎಲ್ಲ ವಿದ್ಯಾರ್ಥಿಗಳನ್ನು ಬಂಕರ್ಗೆ ಶಿಫ್ಟ್ ಮಾಡಲಾಗಿತ್ತು. ಇಂದು ಬೆಳಗ್ಗೆ ಸೈಬರ್ ಅಟ್ಯಾಕ್ ಆದ ಹಿನ್ನೆಲೆ ವಿಡಿಯೋ ಕಾಲ್ ಕೂಡ ಸ್ಥಗಿತಗೊಂಡಿದ್ದು, ಪೋಷಕರು ಮತ್ತಷ್ಟು ಆತಂಕಕ್ಕೆ ಒಳಗಾಗಿದ್ದಾರೆ.
ಇದನ್ನೂ ಓದಿ: ಉಕ್ರೇನ್ನಲ್ಲಿದ್ದಾರೆ ತುಮಕೂರಿನ 10 ವಿದ್ಯಾರ್ಥಿಗಳು: ಪೋಷಕರಲ್ಲಿ ಕ್ಷಣಕ್ಷಣವೂ ಆತಂಕ
ಇನ್ನೂ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ನರಸಕಗಿ ಗ್ರಾಮದ ಸಿದ್ದು ಪೂಜಾರಿ ಕೂಡ ಉಕ್ರೇನ್ನಲ್ಲಿ ಸಿಲುಕಿದ್ದಾರೆ. ಇವರು ಉಕ್ರೇನ್ ದೇಶದ ಚರಾವಿಸ್ಟ್ನಲ್ಲಿರುವ ಬೋಕೋ ಯುನಿಯನ್ ಸ್ಟೇಟ್ ಮೆಡಿಕಲ್ ವಿವಿಯಲ್ಲಿ ಎಂಬಿಬಿಎಸ್ ವಿದ್ಯಾಭ್ಯಾಸ ಮಾಡುತ್ತಿದ್ದರು.
ನಿನ್ನೆ ಸಂಜೆ ಭಾರತಕ್ಕೆ ಬರಲು ವಿಮಾನದ ಟಿಕೇಟ್ ಬುಕ್ ಮಾಡಿದ್ದರು. ಆದರೆ, ವಿಮಾನ ರದ್ದಾದ ಕಾರಣ ಉಕ್ರೇನ್ನಲ್ಲಿ ಸಿಲುಕಿದ್ದು, ಇದರಿಂದ ಅವರ ಮನೆಯಲ್ಲಿ ಆತಂಕ ಆವರಿಸಿದೆ.
ವಿಜಯಪುರದ ಆದರ್ಶ ನಗರವಾಸಿ ಅಮನ್ ಮಮದಾಪುರ ಕೂಡ ಭಾರತಕ್ಕೆ ಬರಲು ನಿನ್ನೆ ವಿಮಾನದ ಟಿಕೆಟ್ ಬುಕ್ ಮಾಡಿದ್ದರು. ಆದರೆ, ವಿಮಾನ ರದ್ದಾದ ಕಾರಣ ಇವರೂ ಸಂಕಷ್ಟಕ್ಕೆ ಸಿಲುಕಿದ್ದಾರೆ.
ವಿಮಾನ ನಿಲ್ದಾಣಕ್ಕೆ ತೆರಳಿದ್ದ ಕಾರಣ ಅಲ್ಲಿಯೇ ಉಳಿದುಕೊಂಡಿದ್ದು, ಅಲ್ಲಿನ ಸದ್ಯದ ಪರಿಸ್ಥಿತಿಯ ವಿಡಿಯೋ ಮಾಡಿ ಕಳುಹಿಸಿದ್ದಾರೆ. ಇನ್ನು ವಿಜಯಪುರದ ಸುಚಿತ್ರಾ ಕವಡಿಮಟ್ಟಿ ಸಹ ಉಕ್ರೇನ್ನಲ್ಲಿ ಸಂಕಷ್ಟ ಎದುರಿಸುತ್ತಿದ್ದಾರೆ.