ವಿಜಯಪುರ: ಇವಿಎಂ ಯಂತ್ರ ದುರುಪಯೋಗವಾಗುತ್ತಿದೆ ಎಂಬ ವಿಪಕ್ಷಗಳ ಆರೋಪಕ್ಕೆ ದೆಹಲಿ ಚುನಾವಣೆ ಫಲಿತಾಂಶದಿಂದ ತಕ್ಕ ಉತ್ತರ ಸಿಕ್ಕಿದೆ ಎಂದು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.
ನಗರದಲ್ಲಿ ಮಾತನಾಡಿ, ದೆಹಲಿ ಚುನಾವಣೆ ಫಲಿತಾಂಶ ಹೀಗೇ ಬರುತ್ತೆ ಅಂತ ಸಮೀಕ್ಷೆಯಲ್ಲಿ ಗೊತ್ತಾಗಿತ್ತು. ಲೋಕಸಭಾ ಚುನಾವಣೆಯಲ್ಲಿ ಜನರು ಬಿಜೆಪಿ ಪಕ್ಷಕ್ಕೆ ಜನಾದೇಶ ನೀಡಿದ್ದಾರೆ. ದೆಹಲಿಯಲ್ಲಿ ಸ್ಥಳೀಯ ಸಮಸ್ಯೆಗಳ ಆಧಾರ ಮೇಲೆ ಆಮ್ ಆದ್ಮಿ ಪಕ್ಷಕ್ಕೆ ಜನಾದೇಶ ಬಂದಿದೆ. ಕೇಂದ್ರ ಸರ್ಕಾರ ಇವಿಎಂ ದುರುಪಯೋಗ ಮಾಡುತ್ತಿದೆ ಎಂದು ಹೇಳಿದ ವಿಪಕ್ಷಗಳ ನಾಯಕರಾದ ಲಾಲೂ ಪ್ರಸಾದ್ ಯಾದವ್, ಮಮತಾ ಬ್ಯಾನರ್ಜಿ ಸೇರಿದಂತೆ ಎಲ್ಲರೂ ಕೇಂದ್ರ ಸರ್ಕಾರಕ್ಕೆ ಹಾಗೂ ಚುನಾವಣಾ ಆಯೋಗಕ್ಕೆ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.
ಸಿಎಂ ಶಾಸಕಾಂಗ ಪಕ್ಷದ ಸಭೆ ಕರೆಯಬೇಕು. ಬಜೆಟ್‌ನಲ್ಲಿ ಮಾಡಬೇಕಾದ ಅಭಿವೃದ್ಧಿ ಕಾರ್ಯ ಹಾಗೂ ಪ್ರಾದೇಶಿಕ ಅಸಮಾಧಾನಗಳ ಚರ್ಚೆ ಮಾಡಬೇಕು ಎಂದರು. ನಾನು ಸಿಎಂ ಆಗುತ್ತೇನೆ ಎಂಬ ಉಮೇಶ್ ಕತ್ತಿ ಹೇಳಿಕೆಗೆ ಪ್ರತಿಕ್ರಿಯಿಸಿ, ಅದು ಅವರ ವೈಯಕ್ತಿಕ ವಿಚಾರ, ಕತ್ತಿಯವರನ್ನು ನೂರಕ್ಕೆ ನೂರು ಮಂತ್ರಿ ಮಾಡುತ್ತೇನೆ ಎಂದು ಸಿಎಂ ಹೇಳುತ್ತಿದ್ದಾರೆ. ನಮಗೆ ಅನ್ಯಾಯವಾದಾಗ ಸಿಎಂ ಜೊತೆಗೆ ಚರ್ಚೆ ಮಾಡುತ್ತೇವೆ. ಮೊನ್ನೆ ಪ್ರವಾಹದ ಸಮಯದಲ್ಲಿ ಕೇಂದ್ರ ಸರ್ಕಾರವನ್ನು ಪ್ರಶ್ನೆ ಮಾಡಿರುವೆ ಎಂದು ತಿಳಿಸಿದರು.
ಇನ್ನು ಮಹೇಶ್ ಕುಮಟಳ್ಳಿ ಎಂಎಸ್ಐಎಲ್ ಅಧ್ಯಕ್ಷ ಸ್ಥಾನ ನಿರಾಕರಿಸಿದ್ದು ಸರಿಯಾಗಿದೆ. ಕುಮಟಳ್ಳಿಯವರದ್ದು ತ್ಯಾಗವಿದೆ. ಅವರಿಗೆ ಯಾವುದೇ ಕೋಟಾ ಅನ್ವಯಿಸುವುದಿಲ್ಲ. ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ನನ್ನ ಒತ್ತಾಯವಿದೆ. ಕುಮಟಳ್ಳಿಯವರನ್ನು ಸಚಿವರಾಗಿ ಮಾಡುತ್ತೇವೆ ಎಂದು ನಾನು ಮತ್ತು ಸಿಎಂ ಭಾಷಣ ಮಾಡಿದ್ದೇವೆ. ಈಗ ನೀಡದಿದ್ದರೆ ನಾವು ವಚನ ಭ್ರಷ್ಟರಾಗುತ್ತೇವೆ. ಹಿಂದೆ ರಾಜ್ಯದ ಜನ ಕುಮಾರಸ್ವಾಮಿಗೆ ಬೈಯುತ್ತಿದ್ದರು, ಮುಂದೆ ನಮಗೆ ಬೈಯುತ್ತಾರೆ ಎಂದರು.