ವಿಜಯಪುರ: ಮುಂಬರುವ ಸಿಂದಗಿ ಉಪಚುನಾವಣೆ ಗೆಲ್ಲಬೇಕಾದರೆ ವಿಜಯಪುರ ಜಿಲ್ಲೆಗೆ ಕನಿಷ್ಠ ಒಂದು ಸಚಿವ ಸ್ಥಾನ ಕೊಟ್ಟು ಸಮಾಜಿಕ ನ್ಯಾಯ ಒದಗಿಸಬೇಕೆಂದು ಎಂದು ಶಾಸಕ ಬಸನಗೌಡ ಪಾಟೀಲ್ ಸರ್ಕಾರಕ್ಕೆ ಒತ್ತಾಯಿಸಿದರು.
ನಗರದಲ್ಲಿ ವಿವಿಧ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ಹಿಂದೆ ಪಕ್ಷದಿಂದ ಟಿಕೇಟ್ ದೊರೆಯದಿದ್ದಾಗ, ಎಂಎಲ್ಸಿ ಚುನಾವಣೆಗೆ ಸ್ಪರ್ಧಿಸಿ ಗೆದ್ದಿದ್ದೇನೆ. ಆದರೆ ಪ್ರತಿಸಲ ಎಂಎಲ್ಸಿ ಚುನಾವಣೆ ಬಂದಾಗ ಇರುವ ಎರಡು ಸೀಟು ಬಾಗಲಕೋಟೆಯವರ ಪಾಲಾಗುತ್ತಿತ್ತು. ಎಂಎಲ್ಸಿ ಸ್ಥಾನ ಇರುವುದು ಅವಳಿ ಜಿಲ್ಲೆಗಳ ಪಾಲಿಗೆ, ಕೇವಲ ಬಾಗಲಕೋಟೆಗೆ ಸಿಕ್ಕರೆ ಹೇಗೆ?. ಇದೇ ಕಾರಣಕ್ಕೆ ಪಕ್ಷೇತರನಾಗಿ ನಿಂತು ಗೆದ್ದ ಮೇಲೆ ಈ ಭಾಗದ ಜನರು ಸ್ವಾಭಿಮಾನದಿಂದ ಗೆಲ್ಲಿಸಿದ್ದಾರೆ ಎಂದು ಹೇಳಿದರು.
ಈಗಲೂ ಸಚಿವ ಸ್ಥಾನದ ವಿಚಾರದಲ್ಲಿ ವಿಜಯಪುರ ಜಿಲ್ಲೆಗೆ ಅನ್ಯಾಯವಾಗಿದೆ. ಬಾಗಲಕೋಟೆ, ಶಿವಮೊಗ್ಗ ಸೇರಿ ಕೆಲ ಜಿಲ್ಲೆಯವರಿಗೆ ಎರಡೆರಡು ಸಚಿವ ಸ್ಥಾನ ನೀಡುತ್ತಿದ್ದಾರೆ. ಯಾಕೆ ಉಳಿದ ಜಿಲ್ಲೆಯವರು ಮತ ಹಾಕಿಲ್ವಾ? ಎಂದು ಪ್ರಶ್ನಿಸಿದರು.
ಅರುಣ್ ಶಹಾಪುರಗೆ ತರಾಟೆ: ಶಿಕ್ಷಣ ಕ್ಷೇತ್ರದಲ್ಲಿ ಸಾಕಷ್ಟು ಕೆಲಸವಿದೆ. ಅದನ್ನು ಸುಧಾರಿಸುವ ಬದಲು ಶಾಸಕ ನಡಹಳ್ಳಿಗೆ ಸಚಿವ ಸ್ಥಾನ ನೀಡಬೇಕೆಂದು ಹೇಳಿಕೆ ನೀಡುತ್ತಿರುವುದು ಅನಾವಶ್ಯಕ ವಿಷಯ ಎಂದು ಎಮ್ಎಲ್ಸಿ ಅರುಣ್ ಶಹಾಪುರ ವಿರುದ್ಧ ಯತ್ನಾಳ್ ಗುಡುಗಿದರು.