ಮುದ್ದೇಬಿಹಾಳ : ಸರ್ಕಾರ ಜಾರಿಗೊಳಿಸಿರುವ ಲಾಕ್ಡೌನ್ ಅವಧಿ ಮುಗಿಯುವವರೆಗೂ ಮುದ್ದೇಬಿಹಾಳ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗುವ ಸೋಂಕಿತರಿಗೆ ಹಾಗೂ ಮುದ್ದೇಬಿಹಾಳ ಪೊಲೀಸ್ ಠಾಣೆಯ ಪೊಲೀಸರಿಗೆ ಪೋಷಕಾಂಶವುಳ್ಳ ಲಘು ಆಹಾರದ ಕಿಟ್ ವಿತರಿಸುವ ಕಾರ್ಯವನ್ನು ಮುಂದುವರೆಸುವುದಾಗಿ ಶಾಸಕ ಎ.ಎಸ್. ಪಾಟೀಲ ನಡಹಳ್ಳಿ ತಿಳಿಸಿದ್ದಾರೆ.
ಈ ಕುರಿತು ಇಂದು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಶಾಸಕರು, ಕೊರೊನಾ ಸೋಂಕು ನಿವಾರಣೆಯಾಗಿ ಪರಿಸ್ಥಿತಿ ನಿಯಂತ್ರಣಕ್ಕೆ ಬರುವವರೆಗೂ ಆಹಾರ ವಿತರಿಸುವ ಕಾರ್ಯವನ್ನು ನಮ್ಮ ಕುಟುಂಬ ಮುಂದುವರೆಸುತ್ತದೆ.
ಈಗಾಗಲೇ ಏಪ್ರಿಲ್ 27ರಿಂದಲೇ ತಾಲೂಕು ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಾಗುವ ಸೋಂಕಿತರಿಗೆ ಹಾಗೂ ಮೇ 3ರಿಂದಲೇ ಕೊರೊನಾ ಕರ್ಫ್ಯೂ ಪಾಲನೆಯಲ್ಲಿ ತೊಡಗಿಕೊಂಡಿರುವ ಪೊಲೀಸರಿಗೆ ಲಘು ಆಹಾರದ ಪೊಟ್ಟಣ ವಿತರಿಸುವ ಕಾರ್ಯ ಪ್ರಗತಿಯಲ್ಲಿದೆ ಎಂದಿದ್ದಾರೆ.
ಕೊರೊನಾ ಎರಡನೇ ಅಲೆಯ ಗಂಭೀರ ಪರಿಣಾಮಗಳ ಹಿನ್ನೆಲೆ, ಕಳೆದ ವರ್ಷದಂತೆ ಈ ವರ್ಷವೂ ಸಾಮೂಹಿಕವಾಗಿ ನೆರವು ನೀಡಲು ಉತ್ಸಾಹ ಇದ್ದರೂ ಪರಿಸ್ಥಿತಿ ಅವಕಾಶ ಕೊಡದಿರುವುದಕ್ಕೆ ನಮಗೆ ಸಂಕಟವಾಗುತ್ತಿದೆ ಎಂದು ತಿಳಿಸಿದ್ದಾರೆ.
ಮುದ್ದೇಬಿಹಾಳ ತಾಲೂಕು ಸರ್ಕಾರಿ ಆಸ್ಪತ್ರೆ ಕೊರೊನಾ ಸೋಂಕಿತರ ಪಾಲಿಗೆ ಸಂಜೀವಿನಿಯಂತೆ ಕೆಲಸ ಮಾಡುತ್ತಿದೆ. ಇಲ್ಲಿ ಕೆಲಸ ಮಾಡುವ ಎಲ್ಲ ವೈದ್ಯರು, ಆರೋಗ್ಯ ಸಿಬ್ಬಂದಿ, ರೋಗಿಗಳ ಜತೆಗೆ ಬರುವವರಿಗೆ ಗುಣಮಟ್ಟದ ಊಟದ ವ್ಯವಸ್ಥೆ ಕಲ್ಪಿಸಲು ಚಿಂತನೆ ನಡೆಸುತ್ತಿದ್ದೇನೆ ಎಂದು ತಿಳಿಸಿದ್ದಾರೆ.
ಎಂತಹದ್ದೇ ಪರಿಸ್ಥಿತಿ ಬಂದರೂ ನಮ್ಮ ಕುಟುಂಬದಿಂದ ಕಳೆದ ಹಲವು ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವ ಸಮಾಜ ಸೇವಾ ಕಾರ್ಯವನ್ನು ಕೈ ಬಿಡುವುದಿಲ್ಲ.
ವ್ಯಾಪಕವಾಗಿ ಹರಡುತ್ತಿರುವ ಸೋಂಕು ನಿಯಂತ್ರಣಕ್ಕೆ ಅಗತ್ಯ ಕ್ರಮಕೈಗೊಳ್ಳುವುದರ ಜತೆಗೆ ಸಂಕಷ್ಟದಲ್ಲಿರುವ ನಮ್ಮ ಜನರಿಗೆ ಯಾವ ರೀತಿ ನೆರವು ನೀಡಬಹುದು ಎನ್ನುವ ಕುರಿತು ಹಲವು ತಜ್ಞರೊಂದಿಗೆ ಮೊಬೈಲ್ ಮೂಲಕವೇ ಚರ್ಚಿಸುತ್ತಿದ್ದೇನೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ತಾಯಂದಿರ ದಿನವನ್ನು ವಿಭಿನ್ನವಾಗಿ ಆಚರಿಸಿದ ಹುಬ್ಬಳ್ಳಿ ಮಕ್ಕಳು, ಯುವಕರು
ಪುರಸಭೆ ನಾಮ ನಿರ್ದೇಶಿತ ಸದಸ್ಯ ರಾಜಶೇಖರ ಹೊಳಿ ಅವರು ಕೊಟ್ಟಿರುವ ನೀರಿನ ಬಾಟಲ್‌ಗಳನ್ನು ಈ ಕಿಟ್‌ನೊಂದಿಗೆ ವಿತರಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ. ಪೊಲೀಸ್ ಠಾಣೆಯ ಹಾಗೂ ಆರೋಗ್ಯ ಇಲಾಖೆಯ ವೈದ್ಯರು, ಸಿಬ್ಬಂದಿಗೆ ಆಹಾರ ಪಟ್ಟಣ ವಿತರಿಸುವ ಸಂದರ್ಭದಲ್ಲಿ ಅಭಿಮಾನಿಗಳಾದ ವಿಕ್ರಂ ಬಿರಾದಾರ್ ಹಾಗೂ ಚೇತನ್ ಶಿವಶಿಂಪಿ, ಡಾ. ಅನಿಲಕುಮಾರ ಶೇಗುಣಸಿ ಇದ್ದರು.