ವಿಜಯಪುರ: ಸಿಎಂ ಪುತ್ರ ವಿಜಯೇಂದ್ರ ವಿರುದ್ಧ ಕಾಂಗ್ರೆಸ್ ಆರೋಪ ವಿಚಾರಕ್ಕೆ ಬಿಜೆಪಿ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ.
ವಿಜಯಪುರದಲ್ಲಿ ಮಾತನಾಡಿದ ಅವರು, ಸಿಎಂ ಯಡಿಯೂರಪ್ಪ ಜನಪ್ರಿಯತೆ ಸಹಿಸದ ಕಾಂಗ್ರೆಸ್ ವಿಜಯೇಂದ್ರ ವಿರುದ್ಧ ಆರೋಪ ಮಾಡುತ್ತಿದೆ. ಯಡಿಯೂರಪ್ಪನವರಂಥ ಸಿಎಂ ಈ ಹಿಂದೆ ಯಾರೂ ಆಗಿಲ್ಲ, ಮುಂದೆ ಯಾರು ಆಗ್ತಾರೆ ಗೊತ್ತಿಲ್ಲ ಎಂದು ಸಿಎಂ ಪರ ಬ್ಯಾಟಿಂಗ್ ಮಾಡಿದ್ರು.
ಕಾಂಗ್ರೆಸ್ಸಿನವರಿಗೆ ಮಾಡಲು ಕೆಲಸವಿಲ್ಲ, ಈ ಹಿನ್ನೆಲೆ ಗೂಬೆ ಕೂರಿಸುತ್ತಿದ್ದಾರೆ. ವಿಜಯೇಂದ್ರ ಪಕ್ಷ ಸಂಘಟನೆಯಲ್ಲಿ ದೊಡ್ಡ ಶಕ್ತಿಯಾಗಿ ಬೆಳೆದಿದ್ದಾರೆ. ಮೈಸೂರು ಭಾಗದಲ್ಲಿ ಜನಪ್ರಿಯ ನಾಯಕರಾಗಿ ಹೊರ ಹೊಮ್ಮುತ್ತಿದ್ದಾರೆ. ಇದನ್ನು ಸಹಿಸದೆ ಕಾಂಗ್ರೆಸ್ ಸುಳ್ಳು ಸುದ್ದಿ ಹರಡಿಸುತ್ತಿದೆ ಎಂದರು.
ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡುವುದಿಲ್ಲ. ಶಾಸಕರಾದ ನಂತರ ಮತಕ್ಷೇತ್ರದ ಎಲ್ಲ ಕೆಲಸ ಆಗಬೇಕೆಂದು ಶಾಸಕರ ಬೇಡಿಕೆಯಾಗಿರುತ್ತದೆ. ಪ್ರವಾಹ ಮತ್ತು ತುರ್ತು ಕೆಲಸಗಳನ್ನು ಮೊದಲ ಆದ್ಯತೆ ಮೇಲೆ ಕೈಗೆತ್ತಿಕೊಳ್ಳಲು ಸೂಚನೆ ನೀಡಲಾಗಿದೆ. ನಂತರ ಬೇರೆ ಕೆಲಸಗಳಿಗೆ ಆದ್ಯತೆ ನೀಡಲಾಗುತ್ತದೆ ಎಂದರು.
ಆರೋಗ್ಯ, ಆಹಾರ ವಿಚಾರಗಳಿಗೆ ಮೊದಲ ಆದ್ಯತೆ ನೀಡಲಾಗುತ್ತದೆ. ಆಹಾರಕ್ಕಾಗಿಯೇ ಪ್ರತಿ ದಿನ ರೂ. 80 ಕೋಟಿ ಹಣ ಬೇಕು. ಇದನ್ನು ಸರಕಾರ ನಿಭಾಯಿಸುತ್ತಿದೆ ಎಂದರು.