ಮುದ್ದೇಬಿಹಾಳ: ಗ್ರಾಪಂಗೆ ಸರಿಯಾದ ಸಮಯಕ್ಕೆ ಪಿಡಿಓ ಬರುವುದಿಲ್ಲ, ಸಾರ್ವಜನಿಕರ ಕೈಗೆ ಸಿಗುತ್ತಿಲ್ಲ ಎಂದು ತಾಲೂಕಿನ ಇಂಗಳಗೇರಿ ಗ್ರಾಮಸ್ಥರು ಶಾಸಕ ಎ.ಎಸ್. ಪಾಟೀಲ ನಡಹಳ್ಳಿ ಎದುರು ದೂರಿದ ಘಟನೆ ನಡೆದಿದೆ.
ತಾಲೂಕಿನ ಇಂಗಳಗೇರಿ ಗ್ರಾಪಂ ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲು ಶಾಸಕರು ತೆರಳಿದ್ದರು. ಈ ವೇಳೆ ಗ್ರಾಮಸ್ಥರು, ಪಿಡಿಓ ವಾರಕ್ಕೆ ಮೂರು ದಿನ ಮಾತ್ರ ಬರುತ್ತಾರೆ. ಇದರಿಂದ ಗ್ರಾಮಸ್ಥರ ಕುಂದುಕೊರತೆಗೆ ಪರಿಹಾರ ಸಿಗುತ್ತಿಲ್ಲ ಎಂಬ ವಿಚಾರವನ್ನು ಶಾಸಕರ ಗಮನಕ್ಕೆ ತಂದರು.
ಈ ವೇಳೆ ಪಿಡಿಓ ವಿಜಯಮಹಾಂತೇಶ ಕೋರಿ ಅವರಿಗೆ ಎಚ್ಚರಿಸಿದ ಶಾಸಕರು, ಗ್ರಾಪಂ ಕಚೇರಿಗೆ ನಿತ್ಯ 10 ಗಂಟೆಗೆ ಬರಬೇಕು. ದಿನಂಪ್ರತಿ ಕಾರ್ಯಾಲಯಕ್ಕೆ ಬಂದು ಗ್ರಾಮಸ್ಥರ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಬೇಕು. ಒಂದು ವೇಳೆ ಈ ಗ್ರಾಪಂನಲ್ಲಿ ಸರಿಯಾದ ದಿನ, ವೇಳೆ ಕಾರ್ಯ ನಿರ್ವಹಿಸಲು ಆಗದಿದ್ದರೆ ನಿಮ್ಮನ್ನು ಮೂಲತಃ ವಿಜಯಪುರಕ್ಕೆ ವರ್ಗಾವಣೆ ಮಾಡಿಸುತ್ತೇನೆ ಎಂದು ಶಾಸಕರು ಖಡಕ್ ವಾರ್ನಿಂಗ್ ನೀಡಿದರು.
ಇದಕ್ಕೆ ಉತ್ತರಿಸಿದ ಪಿಡಿಓ, ವಿಜಯಪುರದಿಂದ ಕುಟುಂಬ ಸಮೇತ ಮುದ್ದೇಬಿಹಾಳಕ್ಕೆ ಸ್ಥಳಾಂತರವಾಗಿ ದಿನಂಪ್ರತಿ ಕರ್ತವ್ಯಕ್ಕೆ ಹಾಜರಾಗುವುದಾಗಿ ತಿಳಿಸಿದರು.
ಮಾನವೀಯತೆ ಮೆರೆದ ಶಾಸಕರು:
ಕೆಲ ದಿನಗಳ ಹಿಂದೆ ರಸ್ತೆ ಅಪಘಾತದಲ್ಲಿ ಅಬ್ಬಿಹಾಳ ಗ್ರಾಮದ ಪರಮಣ್ಣ ಕೊಳ್ಳದ ಎಂಬ ಯುವಕ ತನ್ನೆರಡು ಕಾಲು ಕಳೆದುಕೊಂಡಿದ್ದನು. ಇದಕ್ಕೆ ಸ್ಪಂದಿಸಿದ ಶಾಸಕರು, ಆತನಿಗೆ ಹತ್ತು ಸಾವಿರ ರೂಪಾಯಿ ನೀಡಿ ಮಾನವೀಯತೆ ಮೆರೆದರು.