ವಿಜಯಪುರ : ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಸ್ಥಾನ ಘೋಷಣೆ ಮಾಡಿದ ವಿಚಾರವಾಗಿ ನಗರದಲ್ಲಿ ಪ್ರತಿಕ್ರಿಯೆ ನೀಡಿರುವ ಎಂ. ಬಿ ಪಾಟೀಲ್, ಪ್ರಚಾರ ಸಮಿತಿ ಅಧ್ಯಕ್ಷ ಸ್ಥಾನ ಕುರಿತು ಅಧಿಕೃತ ಆದೇಶ ಪ್ರತಿ ತಲುಪಿಲ್ಲ, ಈ ವಿಚಾರವನ್ನು ಪಕ್ಷದ ವರಿಷ್ಠರು ತಿಳಿಸಿದ್ದಾರೆ ಎಂದು ಹೇಳಿದರು.
ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಗೆ ಅಭಿನಂದನೆ ಸಲ್ಲಿಸುವೆ, ಅವರು ನನ್ನ ಮೇಲೆ ವಿಶ್ವಾಸವಿಟ್ಟಿದ್ದಾರೆ. ರಾಹುಲ್ ಗಾಂಧಿ ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್, ಎಐಸಿಸಿ ಪದಾಧಿಕಾರಿಗಳಿಗೆ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೆವಾಲಾ ಹಾಗೂ ಡಿಕೆಶಿ, ಸಿದ್ದರಾಮಯ್ಯ ಅವರಿಗೆ ಅಭಿನಂದನೆಗಳನ್ನು ತಿಳಿಸುತ್ತೇನೆ ಎಂದರು.
ಎಲ್ಲರೂ ನನ್ನ ಮೇಲೆ ನಂಬಿಕೆ ಇಟ್ಟು ನನಗೆ ಈ ಜವಾಬ್ದಾರಿ ನೀಡಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಮಾಜಿ ಸಿಎಂ ಸಿದ್ದರಾಮಯ್ಯ ಎಲ್ಲರ ಜೊತೆ ಸೇರಿ 2023ರ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಶ್ರಮಿಸುವೆ. ಹಿಂದಿನಂತೆ ಜನಪರ ಆಡಳಿತ ನೀಡಲು ಪ್ರಯತ್ನ ಮಾಡುವೆವು. ನನ್ನ ಮೇಲಿನ ಭರವಸೆ ಇಟ್ಟಿದ್ದಾರೆ, ಅದಕ್ಕೆ ತಕ್ಕಂತೆ ಕೆಲಸ ಮಾಡುತ್ತೇನೆ ಎಂದರು.
ಲಿಂಗಾಯತ ಸಮುದಾಯಕ್ಕೆ ಪ್ರಚಾರ ಸಮೀತಿ ಅಧ್ಯಕ್ಷ ಸ್ಥಾನ ನೀಡಿದ ವಿಚಾರವಾಗಿ ಪ್ರತಿಕ್ರಯಿಸಿದ ಅವರು, ಇಲ್ಲಿ ಜಾತಿಯತೆ ಉದ್ಭವಿಸಲ್ಲ, ಇದೊಂದು ಚಾಲೆಂಜಿಂಗ್ ಜಾಬ್, ಎಲ್ಲ ಹಿರಿಯರು ಕಿರಿಯ ನಾಯಕರ ಸಹಾಯದೊಂದಿಗೆ ಒಂದಾಗಿ ಕೆಲಸ ಮಾಡುತ್ತೇವೆ. ಜತೆಗೆ ಇದೊಂದು ಟೀಂ ವರ್ಕ್. ಕಾಂಗ್ರೆಸ್ನಲ್ಲಿ ಯಾವುದೇ ಬಣಗಳಿಲ್ಲ, ನಮ್ಮದು ಒಂದೇ ಬಣ ಕಾಂಗ್ರೆಸ್. ನಮ್ಮಲ್ಲಿ ಭಿನ್ನಾಭಿಪ್ರಾಯ ಬರಬಾರದು, ಭಿನ್ನಾಭಿಪ್ರಾಯ ಇಲ್ಲ, ಅದು ಬರಲ್ಲ ಎಂದರು.
ಜಾಹಿರಾತು : ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ