ವಿಜಯಪುರ: ರಾಜ್ಯದಲ್ಲಿ ಸಿಡಿ ತಯಾರಿಸುವ ಇಬ್ಬರು ವ್ಯಕ್ತಿಗಳಿದ್ದಾರೆ. ಇದರಲ್ಲಿ ಓರ್ವ ಬಿಜೆಪಿಯಲ್ಲಿ ಹಾಗೂ ಮತ್ತೊಬ್ಬ ಕಾಂಗ್ರೆಸ್ ಪಕ್ಷದಲ್ಲಿದ್ದಾನೆ. ಅವರ ಹೆಸರನ್ನು ನಾನು ಬಹಿರಂಗೊಳಿಸುವದಿಲ್ಲ ಎಂದು ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಹೊಸ ಬಾಂಬ್ ಸಿಡಿಸಿದ್ದಾರೆ.
ನಗರದಲ್ಲಿ ರಸ್ತೆ ಕಾಮಗಾರಿಗೆ ಚಾಲನೆ ನೀಡಿದ ನಂತರ ಮಾತನಾಡಿದ ಅವರು, ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರ ಸಿಡಿ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ, ರಾಜ್ಯದಲ್ಲಿ ಸಿಡಿ ತಯಾರಿಸುವ ಫ್ಯಾಕ್ಟರಿಗಳು ಇವೆ ಎಂದು ಆರೋಪಿಸಿದರು. ಸಿಡಿ ವಿಚಾರದಲ್ಲಿ ಕಾಂಗ್ರೆಸ್ ಕೈವಾಡವಿದೆ ಎಂಬ ಸಚಿವ ಎಸ್.ಟಿ.ಸೋಮಶೇಖರ್ರ ಆರೋಪವನ್ನು ಯತ್ನಾಳ್ ಸಮರ್ಥಿಸಿಕೊಂಡರು.
ಸೋಮಶೇಖರ್ರ ಮಾತಿನಲ್ಲಿ ನಿಜಾಂಶವಿದೆ. ಅವರು 20-25 ವರ್ಷಗಳ ಕಾಲ ಕಾಂಗ್ರೆಸ್ ಪಕ್ಷದಲ್ಲಿ ಇದ್ದ ಅನುಭವದಿಂದ ನಿಜ ಸಂಗತಿಯನ್ನು ಬಹಿರಂಗ ಪಡಿಸಿದ್ದಾರೆ. ಕಾಂಗ್ರೆಸ್ ಸಂಸ್ಕೃತಿ ಬಗ್ಗೆ ಅವರಿಗೆ ಗೊತ್ತಿದೆ. ರಾಜ್ಯಕ್ಕೆ ಕಾಂಗ್ರೆಸ್ ಕೆಟ್ಟ ನಾಯಕತ್ವ ನೀಡಿದೆ ಎಂದು ಪರೋಕ್ಷವಾಗಿ ಡಿ.ಕೆ.ಶಿವಕುಮಾರ್ಗೆ ಟಾಂಗ್ ನೀಡಿದರು.
ಬ್ಲ್ಯಾಕ್ ಮೇಲ್ ದಂಧೆ
ರಾಜಧಾನಿ ಬೆಂಗಳೂರಿನಲ್ಲಿ ಬ್ಲ್ಯಾಕ್ ಮೇಲ್ ಮಾಡುವ ಜನರಿದ್ದಾರೆ. ಅವರು ಈ ರೀತಿ ಸಿಡಿ ತಯಾರಿಸುವುದರಲ್ಲಿ ನಿಸ್ಸೀಮರು. ಬ್ಲ್ಯಾಕ್ ಮೇಲ್ ಮಾಡಿ ರಾಜಕೀಯ ವಿರೋಧಿಗಳಿಂದ ಹಣ ವಸೂಲಿ ಮಾಡುವ ದಂಧೆಯಲ್ಲಿ ತೊಡಗಿದ್ದಾರೆ. ಇತ್ತೀಚಿಗೆ ಬಂಧನಕ್ಕೆ ಒಳಗಾಗಿರುವ ಯುವರಾಜ ಇದೇ ದಂಧೆಯಲ್ಲಿ ತೊಡಗಿದ್ದನು. ಆತ ಸಿಎಂ ಮನೆಯಲ್ಲಿಯೇ ಇರುತ್ತಿದ್ದನು ಎಂದು ಯತ್ನಾಳ್ ಆರೋಪಿಸಿದ್ದಾರೆ.
ಸಮಿತಿ ರಚನೆಗೆ ವಿರೋಧ
ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ವಿಚಾರದಲ್ಲಿ ಸರ್ಕಾರ ನಿವೃತ್ತ ನ್ಯಾಯಾಧೀಶರ ನೇತ್ವತೃದ ಸಮಿತಿ ರಚನೆಗೆ ಶಾಸಕ ಯತ್ನಾಳ್ ವಿರೋಧ ವ್ಯಕ್ತಪಡಿಸಿದರು. ಸರ್ಕಾರ ನೇಮಕ ಮಾಡಿರುವ ಸಮಿತಿಗೆ ನಿಗದಿತ ಗಡುವು ನೀಡಿಲ್ಲ. ಕೇವಲ ನಮ್ಮ ಸಮುದಾಯವಲ್ಲ, ಎಲ್ಲ ಸಮಾಜದವರಿಗೂ ಮೀಸಲಾತಿ ದೊರೆಯಬೇಕು. ಈ ಸಮಿತಿ ಮಾಡುವುದರಿಂದ ಯಾವುದೇ ಪ್ರಯೋಜನವಾಗಲ್ಲ. ಇದೊಂದು ರಾಜಕೀಯ ಸ್ಟಂಟ್ ಅಷ್ಟೇ ಎಂದರು.