ವಿಜಯಪುರ: ಹಿಂದುಪರ ಇರುವ ಶಾಸಕರಿಗೆ 100 ಕೋಟಿ ಅನುದಾನ ನೀಡಲು ಸಿಎಂ ಹಿಂದೇಟು ಹಾಕುತ್ತಿದ್ದಾರೆ. ಅದೇ ಕಾಂಗ್ರೆಸ್ ಶಾಸಕ ಜಮೀರ್ ಅಹಮ್ಮದ್ ಖಾನ್ ಸೇರಿದಂತೆ ಹಲವರಿಗೆ 200 ಕೋಟಿ ರೂ. ಅನುದಾನ ನೀಡುತ್ತಿದ್ದಾರೆ. ಈ ಬಗ್ಗೆ ಮುಂದಿನ ಅಧಿವೇಶನದಲ್ಲಿ ಪ್ರಶ್ನಿಸುವುದಾಗಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಮತ್ತೆ ಸಿಎಂ ಯಡಿಯೂರಪ್ಪ ತೀವ್ರ ಅಸಮಾಧಾನ ಹೊರಹಾಕಿದ್ದಾರೆ.
ನಗರದ ಹೊರ ವಲಯದ ಭೂತನಾಳ ಕೆರೆಯ ಶುದ್ಧ ನೀರಿನ ಘಟಕದ ಹೊಸ ಕಟ್ಟಡದ ಪೂಜೆ ಹಾಗೂ ಘಟಕಕ್ಕೆ ಚಾಲನೆ ನೀಡಿ ಅವರು ಮಾಧ್ಯಮಗಳ ಜೊತೆ ಮಾತನಾಡಿದ್ರು. ಅಧಿವೇಶನದಲ್ಲಿ ಈ ಪ್ರಸ್ತಾಪಿಸಿ ಕಾಂಗ್ರೆಸ್ ಶಾಸಕರಿಗೆ ಎಷ್ಟು ಅನುದಾನ ನೀಡಿದ್ದೀರಿ? ಬಿಜೆಪಿ ಶಾಸಕರಿಗೆ ಎಷ್ಟು ಅನುದಾನ ನೀಡಿದ್ದೀರಿ? ಎಂದು ಮುಖ್ತಮಂತ್ರಿಗಳನ್ನು ಪ್ರಶ್ನಿಸುವುದಾಗಿ ತಿಳಿಸಿದ್ರು.
ಹಿಂದೂ ದೇವತೆಗಳಿಗೆ ಸತತ ಅಪಮಾನ ಮಾಡುವ ಶಾಸಕ ಜಮೀರ ಅಹಮ್ಮದ್ಗೆ 200 ಕೋಟಿ ಅನುದಾನ ಏಕೆ ನೀಡಿದ್ದೀರಿ? ಅವರು ಎಷ್ಟೇ ಅವಮಾನ ಮಾಡಿದರೂ ಸುಮ್ಮನೆ ಏಕೆ ಇರುತ್ತೀರಿ ಎಂದು ಇದೇ ವೇಳೆ ಮುಖ್ಯಮಂತ್ರಿಯನ್ನು ಪ್ರಶ್ನಿಸಿದರು.
ಭದ್ರತೆ ವಾಪಸ್ಗೆ ಅಸಮಾಧಾನ : ತಮಗೆ ಸರ್ಕಾರ ನೀಡಿದ್ದ ವಿಶೇಷ ಭದ್ರತೆಯನ್ನು ಸಿಎಂ ಹಿಂಪಡೆದಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ವಿಜಯಪುರದ ಶಾಸಕ ಯತ್ನಾಳ್ ಅವರು, ಸಿಎಂ ದ್ವೇಷ ರಾಜಕಾರಣ ಮಾಡುತ್ತಿದ್ದಾರೆ. ಅಭಿವೃದ್ಧಿ ಬಗ್ಗೆ ಮಾತನಾಡಿದ್ದಕ್ಕೆ ಈ ಸೌಲಭ್ಯ ಕಡಿತಗೊಳಿಸಿದ್ದಾರೆ ಎಂದು ಆರೋಪಿಸಿದ್ರು. ಸೋಮವಾರ ನಾನು ಬೆಂಗಳೂರಿಗೆ ಹೋಗುತ್ತಿರುವುದಾಗಿ ತಿಳಿಸಿದರು.
ಇದೇ ವೇಳೆ ಸಚಿವ ಜಗದೀಶ್ ಶೆಟ್ಟರ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಯತ್ನಾಳ್, ಹಿಂದೆ ಮುಖ್ಯಮಂತ್ರಿಯಾದವರು ಈಗ ಸಚಿವರಾಗಿದ್ದಾರೆ. ಅಂಥ ಅವಶ್ಯಕತೆ ಏನಿತ್ತು? ಯಾರಾದರೂ ಯುವಕರಿಗೆ ಅವಕಾಶ ನೀಡಬೇಕಾಗಿತ್ತು. ಅವರು ದೊಡ್ಡವರಾಗುತ್ತಿದ್ದರು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ರು.
ಸಚಿವ ಸ್ಥಾನಕ್ಕಾಗಿ ನಾನು ಯಾರ ಮನೆಗೆ ಹೋಗಿಲ್ಲ ಎನ್ನುವ ಮೂಲಕ ಸಚಿವ ಈಶ್ವರಪ್ಪ ಹೇಳಿಕೆ ತಿರುಗೇಟು ನೀಡಿದ ಬಸನಗೌಡ ಪಾಟೀಲ ಯತ್ನಾಳ್, ಮಂತ್ರಿಗಿರಿಗಾಗಿ ಸಚಿವರಾಗಲಿ, ಸಿಎಂಗಾಗಲಿ ಅರ್ಜಿ ಹಾಕಿಲ್ಲ. ಕೇಂದ್ರದಲ್ಲಿ ವಾಜಪೇಯಿ, ಅನಂತ್ ಕುಮಾರ್ ನನ್ನನ್ನು ಗುರುತಿಸಿ ಸಚಿವ ಸ್ಥಾನ ನೀಡಿದ್ದರು. ಇಲ್ಲಿ ಹಿಂದೂ ದೇವತೆಗಳನ್ನು ಅವಮಾನಿಸುವವರೆಗೆ ಸಚಿವ ಸ್ಥಾನ ನೀಡಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಸಂಸದ ರಮೇಶ ಜಿಗಜಿಣಗಿ ನಿನ್ನೆ ಯತ್ನಾಳ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ವಿಚಾರಕ್ಕೆ ಖಾರವಾಗಿ ಪ್ರತಿಕ್ರಿಯಿಸಿ, ಸತ್ತವರ ವಿರುದ್ಧ ಮಾತನಾಡುವದಿಲ್ಲ ಎಂದು ಟಾಂಗ್ ಕೊಟ್ಟರು.
ಇದನ್ನೂ ಓದಿ:'ಲಸಿಕೆಗೂ ಮುನ್ನ ವಿಮೆ ನೀಡಿ' - ಕೊರೊನಾ ವ್ಯಾಕ್ಸಿನ್ ಪಡೆಯಲು ನಿರಾಕರಿಸಿದ ಆರೋಗ್ಯ ಕಾರ್ಯಕರ್ತರು