ವಿಜಯಪುರ: ಸಂಕ್ರಾಂತಿ ಹಬ್ಬದೊಳಗೆ ಸಚಿವ ಸಂಪುಟದಲ್ಲಿ ಭಾರಿ ಬದಲಾವಣೆಯಾಗಲಿದೆ. ವಿಜಯಪುರಕ್ಕೂ ಸಚಿವ ಸ್ಥಾನ ದೊರೆಯಲಿದೆ ಎಂದು ಬಸನಗೌಡ ಪಾಟೀಲ್ ಯತ್ನಾಳ್ ಪುನರುಚ್ಚರಿಸಿದ್ದಾರೆ.
15-18 ವರ್ಷದ ಮಕ್ಕಳಿಗೆ ಲಸಿಕೆ ಹಾಕುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಸಂಪುಟ ಬದಲಾವಣೆ ವೇಳೆ ಎಲ್ಲ ಜಿಲ್ಲೆಗಳಿಗೂ ಪ್ರಾತಿನಿಧ್ಯ ಸಿಗಲಿದೆ. ಹೆಚ್ಚು ಕ್ರಿಯಾಶೀಲ ಶಾಸಕರನ್ನು ಸಚಿವರನ್ನಾಗಿ ಮಾಡಬೇಕು. ಜ.8, 9ರಂದು ಪಕ್ಷದ ಬೈಠಕ್ ನಡೆಯಲಿದೆ. ಅಲ್ಲಿ ಸಂಪುಟ ವಿಸ್ತರಣೆಯಾಗಲಿದೆ ಎಂದರು.
ವಿಜಯಪುರ ಜಿಲ್ಲೆಗೆ ಸೂಕ್ತ ಗೌರವಯುತ ಸ್ಥಾನಮಾನ ಸಿಗುತ್ತದೆ ಎಂಬ ವಿಶ್ವಾಸ ಇದೆ. ನಾನು ಸಚಿವ ಸ್ಥಾನಕ್ಕಾಗಿ ಹೈಕಮಾಂಡ್ ಭೇಟಿಯಾಗುವುದಿಲ್ಲ. ಪ್ರಧಾನಿ ಹಾಗೂ ಪಕ್ಷದ ರಾಷ್ಟ್ರೀಯ ಅಧ್ಯಕ್ಷರ ಬಳಿ ಎಲ್ಲರ ಲೆಕ್ಕಪತ್ರ ಇದೆ. ಲಾಬಿ ಮಾಡುವ ಅಗತ್ಯ ಪಕ್ಷಕ್ಕಿಲ್ಲ. ನಮ್ಮ ಪಕ್ಷದ ಶಾಸಕರ ಅರ್ಹತೆ ಬಗ್ಗೆ ನಾಯಕರಿಗೆ ಗೊತ್ತಿದೆ. ಅದರ ಆಧಾರದ ಮೇಲೆ ಸಚಿವ ಸ್ಥಾನ ಲಭಿಸಲಿದೆ ಎಂದರು.
ಮೇಕೆದಾಟು ಕಾಂಗ್ರೆಸ್ ಲಾಬಿ:
ಮೇಕೆದಾಟು ಯೋಜನೆ ವಿಚಾರವಾಗಿ ಕಾಂಗ್ರೆಸ್ ನಡೆಸಲು ಉದ್ದೇಶಿಸಿರುವ ಪಾದಯಾತ್ರೆ ಕುರಿತು ಪ್ರತಿಕ್ರಿಯೆ ನೀಡಿದ ಶಾಸಕ ಯತ್ನಾಳ್, ರಾಜಕೀಯ ಲಾಭಕ್ಕಾಗಿ ಕಾಂಗ್ರೆಸ್ ಪಾದಯಾತ್ರೆ ನಡೆಸಲು ಮುಂದಾಗಿದೆ. ಇದರಿಂದ ಯಾರಿಗೂ ಪ್ರಯೋಜನವಿಲ್ಲ ಎಂದು ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.
ಆಲಮಟ್ಟಿ ಜಲಾಶಯ ನಿರ್ಮಾಣಕ್ಕೆ ಅಂದಿನ ಪ್ರಧಾನಿಯಾಗಿದ್ದ ಲಾಲ್ ಬಹಾದ್ದೂರ್ ಶಾಸ್ತ್ರಿ ಅವರು 1000 ಕೋಟಿ ರೂ. ನೀಡಿದ್ದರು. 2013ರಲ್ಲಿ ಸಿದ್ದರಾಮಯ್ಯ ಆಲಮಟ್ಟಿ ಜಲಾಶಯಕ್ಕೆ ಪ್ರತಿ ವರ್ಷ 10 ಸಾವಿರ ಕೋಟಿ ನೀಡುವುದಾಗಿ ಭರವಸೆ ನೀಡಿದ್ದರು. ಆದರೆ ಅದನ್ನು 5 ವರ್ಷಕ್ಕೆ 10 ಸಾವಿರ ಕೋಟಿ ಎಂದು ಹೇಳಿ ಜಾರಿಕೊಂಡರು. ಈ ಬಗ್ಗೆ ತಮ್ಮ ಬಳಿ ದಾಖಲೆಗಳು ಇವೆ ಎಂದು ಹೇಳಿದರು.
ಡಿ.ಕೆ.ಶಿವಕುಮಾರ್ ಜಲಸಂಪನ್ಮೂಲ ಸಚಿವರಾಗಿದ್ದರು. ಆಗ ಏಕೆ ಯೋಜನೆ ಜಾರಿ ಮಾಡಲಿಲ್ಲ. ಈಗ ಚುನಾವಣೆ ಬಂದ ಮೇಲೆ ಮೇಕೆದಾಟು ಯೋಜನೆ ನೆನಪಾಗಿದೆ ಎಂದು ಲೇವಡಿ ಮಾಡಿದರು.
ಇದನ್ನೂ ಓದಿ: ಲಾಕ್ಡೌನ್ ಜಾರಿಯಾದರೂ ನಾವು ನಮ್ಮ ಪಾದಯಾತ್ರೆ ನಿಲ್ಲಿಸುವುದಿಲ್ಲ: ಸರ್ಕಾರಕ್ಕೆ ಡಿಕೆಶಿ ಸವಾಲು