ವಿಜಯಪುರ: ಪಿಎಸ್ಐ ನೇಮಕಾತಿ ಪರೀಕ್ಷೆ ವೇಳೆ ಅಕ್ರಮ ಆರೋಪ ಕುರಿತು ತಲೆಮರೆಸಿಕೊಂಡಿರುವ ದಿವ್ಯಾ ಹಾಗರಗಿ ಮಾಜಿ ಮುಖ್ಯಮಂತ್ರಿಗಳ ಪರಮಾಪ್ತೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಗಂಭೀರ ಆರೋಪ ಮಾಡಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿರುವ ಅವರು, ಪ್ರಕರಣದ ಸರಿಯಾದ ತನಿಖೆಯಾಗಬೇಕು ಎಂದು ಒತ್ತಾಯಿಸಿದ್ದಾರೆ.
ದಿವ್ಯಾ ಅವರ ಹಿಂದೆ ನಿಕಟಪೂರ್ವ ಮುಖ್ಯಮಂತ್ರಿಗಳಿದ್ದಾರೆ. ಪ್ರಕರಣದ ಬಗ್ಗೆ ಸೂಕ್ತ ತನಿಖೆಯಾಗಬೇಕು. ಮಾಜಿ ಸಿಎಂ ಆಪ್ತರೇ ಆಗಿರಲಿ, ಅಥವಾ ಸಿಎಂ ಅವರ ಆಪ್ತರೇ ಆಗಿರಲಿ ಯಾರನ್ನೂ ಸಹ ಬಿಡಬಾರದು. ಆರೋಪ ಎದುರಿಸುತ್ತಿರುವವರನ್ನು ಪಕ್ಷದಿಂದ ಉಚ್ಚಾಟನೆ ಮಾಡಲಿ, ಪ್ರಕರಣದಿಂದಾಗಿ ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತದೆ ಎಂದರು.
ಇದನ್ನೂ ಓದಿ: ಪಿಎಸ್ಐ ನೇಮಕಾತಿ ಅಕ್ರಮ.. ಕಲಬುರಗಿ ಬಿಜೆಪಿ ನಾಯಕಿ ದಿವ್ಯಾ ಹಾಗರಗಿ ಮನೆಗೆ ಸಿಐಡಿ ತಂಡ ದಾಳಿ.. ಲೇಡಿ ಲೀಡರ್ ನಾಪತ್ತೆ..
ವಿದೇಶಿ ಬಂಡವಾಳ: ಹುಬ್ಬಳ್ಳಿ ಗಲಭೆಗೆ ವಿದೇಶಿ ಶಕ್ತಿಗಳ ಕೈವಾಡವಿದೆ ಎಂದು ಯತ್ನಾಳ್ ಹೊಸ ಬಾಂಬ್ ಸಿಡಿಸಿದ್ದಾರೆ. ಅವರಿಗೆ ವಿದೇಶದಿಂದ ಹಣ ಬರುತ್ತದೆ. ಭಟ್ಕಳದ ಒಳಗೆ ಹೋದರೆ ಅಲ್ಲಿಂದ ಹೊರಬರು ಆಗದಂತ ವಾತಾವರಣವಿದೆ. ಕಲಬುರಗಿ, ವಿಜಯಪುರದ ಒಂದೊಂದು ಏರಿಯಾದಲ್ಲೂ ಇಂತಹದ್ದೇ ಸ್ಥಿತಿ ಇದೆ ಎಂದು ಆತಂಕ ವ್ಯಕ್ತಪಡಿಸಿದರು.
ಪೊಲೀಸ್ ಇಲಾಖೆ ವರ್ಗಾವಣೆ ವಿಚಾರದಲ್ಲಿ ಸರ್ಕಾರ ಸಮಸ್ಯೆಯಲ್ಲಿ ಸಿಲುಕಿದೆ. ಡಿಸಿ, ಎಸ್ಪಿ ಹಣ ಕೊಟ್ಟು ವರ್ಗಾವಣೆ ಆಗುವ ಪರಿಸ್ಥಿತಿ ಬಂದಿದೆ ಎಂದು ತಮ್ಮದೇ ಸರ್ಕಾರದ ಬಗ್ಗೆ ಅಸಮಾಧಾನ ಹೊರಹಾಕಿದರು. ಇಂತಹ ವ್ಯವಸ್ಥೆಯನ್ನು ಯಾವನೋ ಒಬ್ಬ ಪುಣ್ಯಾತ್ಮ ಮಾಡಿಬಿಟ್ಟ. ಒಬ್ಬ ಮುಖ್ಯಮಂತ್ರಿಯ ಮಗಾ ಇದನ್ನು ಆರಂಭಿಸಿದ ಎಂದು ದೂರಿದರು.
ಎಸ್ಪಿ ಹಾಗೂ ಡಿಸಿಗಳಿಂದ ಹಣ ತೆಗೆದುಕೊಂಡು ವರ್ಗಾವಣೆ ಮಾಡಿದರೆ ಅವರ ದಕ್ಷತೆ, ಪ್ರಾಮಾಣಿಕತೆ ಹಾಳಾಗುತ್ತದೆ. ಅವರು ಪ್ರಾಮಾಣಿಕವಾಗಿ ಕೆಲಸ ಮಾಡದೇ ಭ್ರಷ್ಟಾಚಾರದಲ್ಲಿ ತೊಡಗುತ್ತಾರೆ. ಓರ್ವ ಡಿಸಿ, ಎಸ್ಪಿಗೆ ಹತ್ತು ಕೋಟಿ ಕೊಡು ಎಂದರೆ ಎಲ್ಲಿಂದ ಕೊಡುತ್ತಾರೆ ಎಂದು ಪ್ರಶ್ನಿಸಿದ ಯತ್ನಾಳ್, ಹಣ ನೀಡಲು ಅವರು ಸಹ ಭ್ರಷ್ಟಾಚಾರ ಮಾಡಬೇಕಾಗುತ್ತದೆ ಎಂದು ಹೇಳಿದರು.
ಇದನ್ನೂ ಓದಿ: PSI ನೇಮಕಾತಿ ಅಕ್ರಮ.. ಬಿಜೆಪಿ ನಾಯಕಿ ದಿವ್ಯಾ ಹಾಗರಗಿ ಪತಿ ರಾಜೇಶ್ ಬಂಧನ..ಪತ್ನಿ ನಾಪತ್ತೆ..