ವಿಜಯಪುರ: ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಇಂದು ರಾಜಕೀಯಕ್ಕೆ ಸಂಬಂಧಿಸಿದಂತೆ ಸಂಚಲನ ಮೂಡಿಸುವ ಹೇಳಿಕೆಯನ್ನು ನೀಡಿದ್ದಾರೆ.
ಹೌದು, ದೀಪಾವಳಿ ಯತ್ನಾಳ್ ಪಾಲಿಗೆ ಸಿಹಿಯಾಗುತ್ತಾ ಅಥವಾ ಕಹಿ ಆಗುತ್ತಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ಅವರು, ನವೆಂಬರ್ 25ರವರೆಗೆ ಕಾಯಿರಿ ಎನ್ನುವ ಮೂಲಕ ರಾಜಕೀಯದಲ್ಲಿ ಕುತೂಹಲ ಹೆಚ್ಚಿಸಿದ್ದಾರೆ.
ಕೋವಿಡ್ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಪಟಾಕಿ ನಿಷೇಧ ಮಾಡಿರುವುದಕ್ಕೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ವಿರುದ್ದ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಮತ್ತೆ ಕಿಡಿಕಾರಿದ್ದಾರೆ.
ಆಶ್ರಯ ಮನೆಗಳ ನಿರ್ಮಾಣ ಶಂಕು ಸ್ಥಾಪನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕೇವಲ ಹಿಂದೂಗಳ ಹಬ್ಬ ಬಂದಾಗ ಮಾತ್ರ ಇಂಥ ನಿಷೇಧಗಳು ನೆನಪಿಗೆ ಬರುತ್ತವೆ. ದಸರಾ, ದೀಪಾವಳಿಯಲ್ಲಿ ಕೊರೊನಾ ನೆಪ ಹೇಳಿ ಸರ್ಕಾರ ಪಟಾಕಿ ನಿಷೇಧ ಮಾಡುತ್ತಿದೆ. ಈ ಬಗ್ಗೆ ಮುಖ್ಯಮಂತ್ರಿಗಳ ಜೊತೆ ಮಾತುಕತೆ ನಡೆಸುವುದಾಗಿ ಅವರು ತಿಳಿಸಿದರು.
ಪಟಾಕಿಯಿಂದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದು ಬ್ಯಾನ್ ಮಾಡಿದ್ದಾರೆ ಎಂದು ಸರ್ಕಾರ ಹೇಳುತ್ತಿದೆ ಎಂದು ಕೇಳಲಾದ ಪ್ರಶ್ನೆಗೆ ಮಾಧ್ಯಮಗಳ ಮೇಲೆ ಗರಂ ಆದ ಶಾಸಕರು ಹಿಂದೂಗಳ ಹಬ್ಬ ಬಂದಾಗ ಮಾತ್ರ ಇದೆಲ್ಲ ನೆಪ ಆರಂಭವಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.