ಮುದ್ದೇಬಿಹಾಳ: ಚಾಲುಕ್ಯ, ಹಂಪಿ, ಪಟ್ಟದಕಲ್ಲು, ನವರಸಪುರ ಉತ್ಸವ ಹೀಗೆ ಹಲವು ಕಾರ್ಯಕ್ರಮಗಳನ್ನು ನಾಡಿನ ಜನತೆಯ ಒಳಿತಿಗಾಗಿ ಸರ್ಕಾರವೇ ಆಚರಿಸುತ್ತಿದ್ದು, ಅದೇ ಮಾದರಿಯಲ್ಲಿ ಬಸವನ ಬಾಗೇವಾಡಿಯಲ್ಲಿ ಬಸವ ಉತ್ಸವವನ್ನು ಆಚರಿಸುವಂತೆ ಸಂಬಂಧಿಸಿದವರಿಗೆ ನಿರ್ದೇಶನ ನೀಡಬೇಕೆಂದು ಆಗ್ರಹಿಸಿ ಶಾಸಕ ಹಾಗೂ ಆಹಾರ ಪೂರೈಕೆ ನಿಗಮದ ಅಧ್ಯಕ್ಷ ಎ.ಎಸ್.ಪಾಟೀಲ ನಡಹಳ್ಳಿ ಸಿಎಂಗೆ ಪತ್ರ ಬರೆದಿದ್ದಾರೆ.
ಈ ಕುರಿತು ಸಿಎಂಗೆ ಬರೆದಿರುವ ಪತ್ರದಲ್ಲಿ, ಬಸವನ ಬಾಗೇವಾಡಿ ಆಧ್ಯಾತ್ಮದ ನೆಲೆಬಿಡು. ಸಾಹಿತ್ಯ ಸಂಸ್ಕೃತಿಗಳ ತವರು ನೆಲೆಯಾಗಿದೆ. ವರ್ಗ, ವರ್ಣ ಭೇದ, ಲಿಂಗ ಭೇದಗಳನ್ನಳಿಸಿ ಸಮ ಸಮಾಜ ನಿರ್ಮಾಣದ ಕನಸು ಕಂಡು ಅದನ್ನು ಸಕಾರಗೊಳಿಸಿ ಮಹಾತ್ಮರೆನಿಸಿದ ಬಸವಣ್ಣನವರು ಹುಟ್ಟಿದ ಸ್ಥಳದಲ್ಲಿ ಬಸವಾದಿ ಶರಣರ ಚಿಂತನೆಗಳನ್ನು ಹೊರಸೂಸುವ ಕಾರ್ಯಕ್ರಮಗಳನ್ನು ಸರ್ಕಾರ ಆಯೋಜಿಸದೆ ಇರುವುದು ನೋವಿನ ಸಂಗತಿಯಾಗಿದೆ.
ಆದ್ದರಿಂದ ಬಸವನ ಬಾಗೇವಾಡಿಯಲ್ಲಿ ಬಸವ ಉತ್ಸವ ಆಚರಣೆಯನ್ನು ಇದೇ ವರ್ಷದಿಂದಲೇ ಆಚರಣೆ ಜಾರಿ ಬರುವಂತೆ ಬಸವಾದಿ ಶರಣರ ವಚನಗಳನ್ನು ಜಗತ್ತಿನಾದ್ಯಂತ ಬೆಳಕು ಚೆಲ್ಲಲು ಅನುಕೂಲವಾಗುವಂತೆ ಬಸವ ಜಯಂತಿಯoದು ರಾಷ್ಟ್ರೀಯ ಬಸವ ಉತ್ಸವದ ಮೂಲಕ ಅರ್ಥಪೂರ್ಣ ಕಾರ್ಯಕ್ರಮವನ್ನಾಗಿ ಆಚರಿಸಲು ಸಂಬಂಧಿಸಿದವರಿಗೆ ನಿರ್ದೇಶನ ನೀಡಲು ಮನವಿ ಮಾಡಿದ್ದಾರೆ.