ಮುದ್ದೇಬಿಹಾಳ (ವಿಜಯಪುರ): ಮುದ್ದೇಬಿಹಾಳ ಮತಕ್ಷೇತ್ರವನ್ನು ಸಿಂಗಪುರ ಮಾದರಿಯಲ್ಲಿ ಅಭಿವೃದ್ಧಿಪಡಿಸಲು ಪಣ ತೊಟ್ಟಿದ್ದೇನೆ. ತಾಲೂಕಿನ ಪ್ರತಿಯೊಬ್ಬ ಯುವಕರು, ರೈತರು ಮಿನಿ ಅಂಬಾನಿಗಳಾಗಬೇಕು ಎಂಬುದು ನನ್ನ ಕನಸು ಎಂದು ಶಾಸಕ ಎ.ಎಸ್. ಪಾಟೀಲ ನಡಹಳ್ಳಿ ಹೇಳಿದರು.
ತಾಲೂಕಿನ ಕುಂಟೋಜಿ ಗ್ರಾಮದ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಶನಿವಾರ ರಾತ್ರಿ ಹಮ್ಮಿಕೊಂಡಿದ್ದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದರು. ಕುಂಟೋಜಿ ಗ್ರಾಮದಲ್ಲಿ ರಾಜ್ಯ ಹೆದ್ದಾರಿಯಿಂದ ಹಾಯ್ದು ಹೋಗಿರುವುದರಿಂದ ಸಿಲಿಕಾನ್ ಸಿಟಿಯಂತೆ ಕಾಣುತ್ತಿದೆ. ರೈತರಿಗೆ ನಿರಂತರ ವಿದ್ಯುತ್ ಕಲ್ಪಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.
ಮುದ್ದೇಬಿಹಾಳದಲ್ಲಿ 28 ಕೋಟಿ ರೂ., ತಾಳಿಕೋಟಿಯಲ್ಲಿ 22 ಕೋಟಿ ರೂ. ಹಾಗೂ ನಾಲತವಾಡದಲ್ಲಿ 5 ಕೋಟಿ ರೂ. ಅಭಿವೃದ್ಧಿ ಕೆಲಸ ನಡೆದಿದೆ. 28 ಕೋಟಿ ರೂ. ವೆಚ್ಚದಲ್ಲಿ ಎಸ್.ಎಸ್ಟಿ ಪಿಯು ಕಾಲೇಜು, ಡಿಗ್ರಿ ಕಾಲೇಜು ನಿರ್ಮಿಸಲಾಗುತ್ತಿದೆ. ಶುದ್ಧ ಕುಡಿವ ನೀರು ಪೂರೈಕೆ ಯೋಜನೆಯಡಿ ಪ್ರತಿ ಮನೆಗೂ ನಲ್ಲಿ ಅಳವಡಿಸಿ, ನೀರು ಸರಬರಾಜು ಮಾಡಲು 800 ಕೋಟಿ ರೂ. ಅನುದಾನದ ಮಂಜೂರಾತಿ ಸಿಕ್ಕಿದೆ. ಕಾಲುವೆಗಳ ನವೀಕರಣ, ವಿತರಣಾ ಕಾಲುವೆ, ಹೊಲಗಾಲುವೆಗಳ ನಿರ್ಮಾಣಕ್ಕೆ 131 ಕೋಟಿ ರೂಗಳ ಟೆಂಡರ್ ಕರೆಯಲಾಗಿದ್ದು, ಶೀಘ್ರವೇ ಕೆಲಸ ಆರಂಭಿಸಲಾಗುವುದು ಎಂದು ಹೇಳಿದರು.
ಬಿಜೆಪಿ ತಾಲೂಕು ಕಾರ್ಯದರ್ಶಿ ಸಿದ್ದು ಹೆಬ್ಬಾಳ ಮಾತನಾಡಿ, ಶಾಸಕರಾದ ಎ.ಎಸ್.ಪಾಟೀಲ ನಡಹಳ್ಳಿ ಅವರು ಸೂರ್ಯಕಾಂತಿ ಬೆಳೆಗೆ ಕೋರಿ ಹುಳುವಿನ ಬಾಧೆ ಕಂಡು ಬಂದಾಗ ರೈತರ ಪರವಾಗಿ ಬೀದಿಗಿಳಿದು ಹೋರಾಟ ಮಾಡುವ ಮೂಲಕ ತಮ್ಮ ಸಾಮಾಜಿಕ ಜೀವನದ ಪ್ರಥಮ ಹೆಜ್ಜೆ ಆರಂಭಿಸಿದ್ದು, ಇದೇ ಕುಂಟೋಜಿ ಗ್ರಾಮದ ಬಸವೇಶ್ವರನ ಸನ್ನಿಧಿಯಿಂದ ಎಂದು ಹೇಳಲು ಹೆಮ್ಮೆ ಎನಿಸುತ್ತದೆ ಎಂದರು.