ವಿಜಯಪುರ: ಆ.15ರಂದು ಜಿಲ್ಲೆಯಲ್ಲಿ ಕೋವಿಡ್-19 ಚಿಕಿತ್ಸೆ ಪಡೆಯುತ್ತಿರುವ ರೋಗಿಗಳ ಜೊತೆ ವಿಡಿಯೋ ಸಂವಾದ ನಡೆಸುವುದಾಗಿ ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.
ನಗರದ ನೂತನ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲಾ ಕೋವಿಡ್ ಆಸ್ಪತ್ರೆ ಜೊತೆ ವಿವಿಧ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪಾಸಿಟಿವ್ ರೋಗಿಗಳ ಜೊತೆ ಜಿಲ್ಲಾಧಿಕಾರಿ ಕಚೇರಿಯ ವಿಡಿಯೋ ಸಭಾಂಗಣದಲ್ಲಿ ಬೆಳಗ್ಗೆ 10-30 ರಿಂದ 11-30 ರವರೆಗೆ ವಿಡಿಯೋ ಸಂವಾದ ನಡೆಸಲಾಗುವುದು. ಪಾಸಿಟಿವ್ ರೋಗದಿಂದ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳಿಗೆ ಧೈರ್ಯ ತುಂಬುವ ಕೆಲಸ ಮಾಡಲಾಗುವುದು ಎಂದ ಅವರು ಈ ವೇಳೆ ರೋಗಿಗಳಿಗೆ ಆಸ್ಪತ್ರೆಯಲ್ಲಿ ಯಾವುದಾದರೂ ತೊಂದರೆ ಆಗುತ್ತಿದ್ದರೆ, ಹೆಚ್ಚುವರಿ ಸೇವೆಯ ಅಗತ್ಯ ಸೇರಿದಂತೆ ಅವರ ಬೇಡಿಕೆಗಳನ್ನು ಆಲಿಸಿ ಅವುಗಳಿಗೆ ಸಾಧ್ಯವಾದಷ್ಟು ಪರಿಹಾರ ಕಂಡುಕೊಳ್ಳುವುದಾಗಿ ತಿಳಿಸಿದರು.
ಜಿಲ್ಲೆಯಲ್ಲಿ ಕೊರೊನಾ ಲಕ್ಷಣಗಳು ಕಂಡು ಬಂದ ಶೇ.40 ರಷ್ಟು ರೋಗಿಗಳಿಗೆ ಹೋಮ್ ಐಸೋಲೇಶನ್ ವ್ಯವಸ್ಥೆ ಮಾಡಲಾಗಿದೆ. ತಜ್ಞ ವೈದ್ಯರು ಅವರ ಆರೋಗ್ಯದ ಮೇಲೆ ನಿಗಾ ಇಟ್ಟಿದ್ದಾರೆ. ಸರಿಯಾದ ವೇಳೆ ಔಷಧಿ ವ್ಯವಸ್ಥೆ ಸಹ ಮಾಡಲಾಗಿದೆ ಎಂದರು.
ಈ ಸಾಂಕ್ರಾಮಿಕ ರೋಗದ ವಿರುದ್ಧ ವ್ಯವಸ್ಥಿತವಾಗಿ ಹೋರಾಡುತ್ತಿದ್ದು, ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕೋವಿಡ್ ರೋಗಿಗಳು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದುತ್ತಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು. ಜಿಲ್ಲೆಯಲ್ಲಿ ಅತ್ಯಂತ ವ್ಯವಸ್ಥಿತವಾಗಿ ಕೋವಿಡ್ಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಜಿಲ್ಲೆಯಲ್ಲಿ ಕೋವಿಡ್‍ನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾದವರು ಶೇ. 77 ರಷ್ಟು ಇದ್ದಾರೆ. ರಾಜ್ಯದಲ್ಲಿ ಬಿಡುಗಡೆ ಪ್ರಮಾಣದಲ್ಲಿ ವಿಜಯಪುರ ಮುಂಚೂಣಿಯಲ್ಲಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.