ವಿಜಯಪುರ: ನಗರದಲ್ಲಿ ಇಂದಿನಿಂದ ಶ್ವಾಸಕೋಶದ ತೊಂದರೆ ಹಾಗೂ ಗಂಭೀರ ರೀತಿಯ ಪ್ರಕರಣಗಳ ಚಿಕಿತ್ಸೆಗೆ ಅನುಕೂಲವಾಗುವಂತೆ ಗಂಟಲು ದ್ರವ ಮಾದರಿ ಪರೀಕ್ಷಾ ಪ್ರಯೋಗಾಲಯ ಆರಂಭಿಸಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.
ಜಿಲ್ಲಾಧಿಕಾರಿಗಳ ಕಾರ್ಯಾಲಯದಲ್ಲಿ ಇಂದು ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಜಿಲ್ಲೆಯ ಶಾಸಕರೊಂದಿಗೆ ಕೋವಿಡ್-19 ಮುನ್ನೆಚ್ಚರಿಕಾ ಸಭೆ ನಡೆಸಿದ ಅವರು, ಜಿಲ್ಲಾಸ್ಪತ್ರೆಯನ್ನು ಕೋವಿಡ್ ಆಸ್ಪತ್ರೆಯಾಗಿ ಪರಿವರ್ತಿಸಿರುವುದರಿಂದ ಅನ್ಯ ವೈದ್ಯಕೀಯ ಸೇವೆ ಕಲ್ಪಿಸಲು ಪ್ರತ್ಯೇಕ ವಿಭಾಗ ತೆರೆಯುವ ಕುರಿತಂತೆ ಕ್ರಮ ಕೈಗೊಳ್ಳಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲೆಯಲ್ಲಿ ಈವರೆಗೆ 1990 ಜನರು ವಿದೇಶ ಮತ್ತು ಇತರೆ ಕಡೆಯಿಂದ ಬಂದ ಬಗ್ಗೆ ವರದಿಯಾಗಿದ್ದು, ತೀವ್ರ ನಿಗಾ ಇಡಲಾಗಿದೆ. ಈವರಗೆ 424 ಜನರು 28 ದಿನಗಳ ಐಸೊಲೇಷನ್ ಅವಧಿ ಪೂರ್ಣಗೊಳಿಸಿದ್ದಾರೆ. 1564 ಜನರು 15ರಿಂದ 28 ದಿನಗಳ ರಿಪೋರ್ಟಿಂಗ್ ಅವಧಿಯಲ್ಲಿದ್ದಾರೆ. ಈವರಗೆ 46 ಕೊರೊನಾ ಪಾಸಿಟಿವ್ ಪ್ರಕರಣಗಳು ದೃಢಪಟ್ಟಿದ್ದು, 11 ಜನ ಗುಣಮುಖರಾಗಿದ್ದಾರೆ. 2119 ಜನರ ಗಂಟಲು ದ್ರವ ಮಾದರಿ ಪರೀಕ್ಷೆಯಲ್ಲಿ 1934 ಜನರ ಗಂಟಲು ದ್ರವ ಮಾದರಿ ವರದಿ ನೆಗೆಟಿವ್ ಬಂದಿದೆ. ಹಾಗೂ 141 ಜನರ ಗಂಟಲು ದ್ರವ ಮಾದರಿ ವರದಿ ಬರಬೇಕಿದೆ. ಅದರಂತೆ ಪಾಸಿಟಿವ್ ಪ್ರಕರಣಗಳ ಸಂಪರ್ಕ ಪತ್ತೆ ಮೇಲೆ ತೀವ್ರ ನಿಗಾ ಇಡುವಂತೆ ಸೂಚನೆ ನೀಡಿದರು.
ಸಭೆಯಲ್ಲಿ ಶಾಸಕ ಎಂ.ಬಿ.ಪಾಟೀಲ ಮಾತನಾಡಿ, ಗೋವಾದಲ್ಲಿನ ಜಿಲ್ಲೆಯ ಕಾರ್ಮಿಕರಿಗೆ ಪ್ರವೇಶಾವಕಾಶ ಕಲ್ಪಿಸುವ ಕುರಿತು ಕಂಟೈನ್ಮೆಂಟ್ ವಲಯದಲ್ಲಿ ಆರೋಗ್ಯ ಸೇತು ಆ್ಯಪ್ ಕಡ್ಡಾಯಗೊಳಿಸಲು, ರತ್ನಾಪುರ ಕಂಟೈನ್ಮೆಂಟ್ ಭಾಗದ ಎನ್ಆರ್ಇಸಿಜಿಎ ಅಡಿ ಕಾರ್ಡ್ ಇದ್ದವರಿಗೆ ತಲಾ 2000 ರೂಪಾಯಿ ಸಹಾಯಧನ ಒದಗಿಸುವಂತೆ ಮನವಿ ಮಾಡಿದರು.
ಶಾಸಕ ಯಶವಂತ ರಾಯಗೌಡ ಪಾಟೀಲ ಮಾತನಾಡಿ, ರೈತರ ತೋಟಗಾರಿಕೆ ಬೆಳೆಗಳನ್ನು ಆವರ್ತ ನಿಧಿಯಡಿ ತಂದು ಬೆಂಬಲ ಬೆಲೆ ಕಲ್ಪಿಸಬೇಕು. ಮಹಾರಾಷ್ಟ್ರ ರಾಜ್ಯದ ಉಜ್ಜನಿ ಜಲಾಶಯದಿಂದ ಹೆಚ್ಚುವರಿ ನೀರು ಕಲ್ಪಿಸಬೇಕು ಮತ್ತು ರೈತರ ಬೆಳೆಗಳಿಗೆ ಉತ್ತಮ ಬೆಲೆ ಮತ್ತು ಮಾರಾಟ ವ್ಯವಸ್ಥೆ ಕಲ್ಪಿಸಲು ಸಲಹೆ ನೀಡಿದರು.