ವಿಜಯಪುರ: ಸಿಎಂ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿಯೇ ಮುಂದಿನ ಚುನಾವಣೆ ಎದುರಿಸುವುದಾಗಿ ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ಸ್ಪಷ್ಟ ಪಡಿಸಿದರು.
ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಯಕತ್ವದ ಬದಲಾವಣೆ ಕೇವಲ ಊಹಾಪೋಹ ಅಷ್ಟೇ. ಸಿಎಂ ಬಿಎಸ್ವೈ ಅಧಿಕಾರ ವಹಿಸಿಕೊಂಡ ಮೇಲೆ ಪ್ರವಾಹ, ಕೊರೊನಾದಂತ ಸಂಕಷ್ಟ ಬಂದಿವೆ. ಅದನ್ನು ಸಮರ್ಥವಾಗಿ ಎದುರಿಸಿ ರಾಜ್ಯದಲ್ಲಿ ಉತ್ತಮ ಆಡಳಿತ ನೀಡಿದ್ದಾರೆ. ಆದರೆ ಕೆಲವರು ಸುಮ್ಮನೆ ಸುದ್ದಿ ಹರಡಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಂಥ ಸುಳ್ಳು ಸುದ್ದಿ ಹರಡುವವರ ವಿರುದ್ಧ ಸೂಕ್ತ ಸಮಯದಲ್ಲಿ ಹೈಕಮಾಂಡ್ ಕ್ರಮ ಕೈಗೊಳ್ಳಲಿದೆ. ಇಂಥ ಸುದ್ದಿ ಹರಡಿಸುವವರು ಯಾರು ಎಂಬುದು ಗೊತ್ತಿದೆ. ಅದು ಹೈಕಮಾಂಡ್ಗೂ ಗೊತ್ತು. ಶೀಘ್ರ ಅಂಥವರ ಮೇಲೆ ಕ್ರಮ ಕೈಗೊಳ್ಳಲಿದ್ದಾರೆ ಎಂದು ಹೇಳಿದರು.
ಯತ್ನಾಳ ವಿರುದ್ಧ ಪ್ರತಿಕ್ರಿಯೆಗೆ ನಕಾರ:
ಸಿಎಂ ವಿರುದ್ಧ ಮಾತನಾಡುವ ನಾಯಕರ ಬಗ್ಗೆ ಮಾತನಾಡುವಷ್ಟು ದೊಡ್ಡವಳು ನಾನಲ್ಲ, ಇನ್ನು ಚಿಕ್ಕವಳು ಎನ್ನುವ ಮೂಲಕ ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿಕೆಗಳ ಬಗ್ಗೆ ಪ್ರತಿಕ್ರಿಯೆ ನೀಡದೆ ಸುಮ್ಮನಾದರು.