ವಿಜಯಪುರ: ವಿದ್ಯುತ್ ದರವನ್ನು ನಮ್ಮ ಸರ್ಕಾರ ಹೆಚ್ಚಳ ಮಾಡಿದ್ದಲ್ಲ ಸ್ವಾಯತ್ತ ಹೊಂದಿರುವಂತಹ ಕೆಇಆರ್ಸಿ ಈ ವಿದ್ಯುತ್ ದರವನ್ನು ಹೆಚ್ಚಳ ಮಾಡಿದೆ ಎಂದು ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂಬಿ ಪಾಟೀಲ ಸ್ಪಷ್ಟಪಡಿಸಿದರು.
ವಿದ್ಯುತ್ ದರ ಹೆಚ್ಚಳ ವಿಚಾರಕ್ಕೆ ಸಂಬಂಧಿಸಿದಂತೆ ವಿಜಯಪುರದಲ್ಲಿ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂಬಿ ಪಾಟೀಲ್ ಮಾಧ್ಯಮಗಳ ಜೊತೆ ಮಾತನಾಡಿ, ವಿದ್ಯುತ್ ದರ ನಮ್ಮ ಸರ್ಕಾರ ಬರುವ ಮೊದಲೇ ಹೆಚ್ಚಳವಾಗಿದೆ. ಹೀಗಾಗಿ ಬೆಲೆ ಏರಿಕೆಗೆ ನಮಗೆ ಯಾವುದೇ ಸಂಬಂದ ಇಲ್ಲ. ಅದನ್ನು ಹಿಂಪಡೆಯಲು ಆಗಲ್ಲ ಎಂದು ಈಗಾಗಲೇ ಮುಖ್ಯ ಮಂತ್ರಿಗಳು ಹೇಳಿದ್ದಾರೆ ಎಂದ್ರು.
ಆದ್ರೂ ಸಹ ನಾನು ಸಿಎಂ ಜೊತೆಗೆ ಚರ್ಚೆ ಮಾಡುತ್ತೇನೆ. ಕೈಗಾರಿಕೆಗಳು ಸೇರಿದಂತೆ ದಯವಿಟ್ಟು ಸಹಕಾರ ಮಾಡಿ ಎಂದು ವಿನಂತಿ ಮಾಡುತ್ತೇನೆ. ವಿದ್ಯುತ್ ದರ ಕೆಇಆರ್ಸಿ ಇಂದ ಆಗಾಗ ಏರಿಕೆ ಆಗ್ತಿರುತ್ತೆ. ಅದನ್ನು ಸರ್ಕಾರ ಮಾಡಬೇಕಾಗಿದ್ದಲ್ಲ. ಕೆಇಆರ್ಸಿ ಅವರು ಆಗಾಗ ಮಾಡ್ತಾರೆ. ಇವತ್ತು ದರ ಏರಿಕೆ ಮಾಡಿದ್ದಾರೆ. ಮುಂದೆ ಸಹ ಕಾಲಕಾಲಕ್ಕೆ ವಿದ್ಯುತ್ ದರ ಏರಿಕೆ ಮಾಡ್ತಾರೆ. ಎಲ್ಲರೂ ಸಹಕಾರ ಮಾಡಬೇಕು. ಸಿಎಂ ಹಾಗೂ ಇಂಧನ ಸಚಿವ ಜಾರ್ಜ್ ಜೊತೆ ಚರ್ಚೆ ಮಾಡಿ ಏನು ಪರಿಹಾರ ಮಾಡಲು ಸಾಧ್ಯವಿದೆ ಅದನ್ನು ಮಾಡುತ್ತೇವೆ ಎಂದು ಭರವಸೆ ನೀಡಿದರು.
ಅಕ್ಕಿ ವಿಚಾರದಲ್ಲಿ ಕೇಂದ್ರ ರಾಜಕೀಯ: ಬಡವರು ತಿನ್ನುವಂತಹ ಅಕ್ಕಿ ವಿಚಾರದಲ್ಲಿ ಕೇಂದ್ರ ಸರ್ಕಾರ ರಾಜಕೀಯ ಮಾಡುತ್ತಿದೆ. ನಾವು ಪತ್ರ ಬರೆದಾಗ ಅವರು ಉತ್ತರ ಬರೆದರು. ಆದರೂ ಸಹಿತ ನಮ್ಮ ಸಿಎಂ ಮತ್ತೊಮ್ಮೆ ಕೇಳಿದರು. ಆಗ ಅವರು ಏಳು ಲಕ್ಷಕ್ಕೂ ಹೆಚ್ಚು ಮೆಟ್ರಿಕ್ ಟನ್ ಅಕ್ಕಿ ಇದೆ ಎಂದು ಹೇಳಿದರು. ಅದಾದ ಮೇಲೆ ಇದು ರಾಜಕೀಯ ನಡೆದಿದೆ. ಹೀಗಾಗಿ ಬಡವರ ಅನ್ನದ ಜೊತೆ ರಾಜಕೀಯ ಮಾಡುವುದು ಸರಿಯಲ್ಲ ಎಂದರು.
ನಾವು ಉಚಿತವಾಗಿ ಏನು ಅಕ್ಕಿ ಕೇಳುತ್ತಿಲ್ಲ. ಇದಕ್ಕೆ ದುಡ್ಡು ಕೊಟ್ಟು ಅಕ್ಕಿ ಕೇಳುತ್ತಿದ್ದೇವೆ. ಆದ್ರೆ ನಮಗೆ ಬದ್ಧತೆಯಿದೆ. ನಾಲ್ಕು ದಿನ ವಿಳಂಭವಾಗಬಹುದು ಹೊರತು, ನುಡದಂತೆ ನಾವು ಅಕ್ಕಿ ನೀಡುತ್ತವೆ. ಯಾವುದೇ ಪರಿಸ್ಥಿತಿಯಲ್ಲಿ ಆಗಲಿ ನಾವು 10 ಕೆಜಿ ಅಕ್ಕಿಯನ್ನು ಜನಕ್ಕೆ ನೀಡುತ್ತೇವೆ ಎಂದು ಹೇಳಿದರು.
ಅಕ್ಕಿ ಬದಲು ಜೋಳ, ರಾಗಿ ಪರ್ಯಾಯ ಮಾರ್ಗವಾಗಿ ನೀಡಲು ಅವುಗಳು ಸರಳವಾಗಿ ಸಿಗುವುದಿಲ್ಲ. ಈ ಬಗ್ಗೆಯೂ ನಾವು ಚರ್ಚೆ ನಡೆಸಿದ್ದೇವೆ ಮತ್ತು ನೀಡುವ ಚಿಂತನೆ ಇದೆ. ಜೋಳ, ರಾಗಿ ನಮಗೆ ಬೇಕಾದಷ್ಟು ಸಿಕ್ಕರೇ ನಾವು ಹಂಚಲು ಸಾಧ್ಯವಾಗುತ್ತದೆ. ಆದರೆ ಜನಕ್ಕೆ ನೀಡುವಷ್ಟು ಜೋಳ, ರಾಗಿ ಸಿಗುವುದಿಲ್ಲ. ಈಗ ನಮಗೆ ಜೋಳ, ಗೋಧಿ ಸಿಗುತ್ತಿಲ್ಲ. ಇದರ ಬೆಳೆ ಕಡಿಮೆಯಾಗಿದೆ ಎಂದರು.
ಸಿಎಂ ದೆಹಲಿ ಪ್ರವಾಸ: ಎಲ್ಲ ಸಚಿವರು ದೆಹಲಿ ಪ್ರವಾಸಕ್ಕೆ ತೆರಳಿಲ್ಲ. ಕೆಲ ಸಚಿವರು ಮಾತ್ರ ಸಿಎಂ ಸಿದ್ದರಾಮಯ್ಯ ಜೊತೆ ದೆಹಲಿ ಪ್ರವಾಸಕ್ಕೆ ತೆರಳಿದ್ದಾರೆ. ನಾನು ಸಹ ದೆಹಲಿಗೆ ಹೋಗಬೇಕು. ನಮ್ಮ ರೋಡ್ ಮ್ಯಾಪ್ ಸಿದ್ದವಾಗುತ್ತಿದೆ. ಈ ತಿಂಗಳ 27ಕ್ಕೆ ನನ್ನ ಅಂತಿಮ ಸಭೆಯೊಂದು ಇದೆ. ಈ ಸಭೆಯಲ್ಲಿ ನಾವು ಏನೆಲ್ಲ ಮಾಡಬೇಕೆಂದು ಕಾರ್ಯಕ್ರಮ ಹಾಕಿಕೊಂಡಿದ್ದೇವೆ. ಇದಾದ ಜುಲೈ ಮೊದಲ ವಾರದಲ್ಲಿ ನಾನು ದೆಹಲಿಗೆ ಹೋಗಲಿದ್ದೇನೆ ಎಂದು ಹೇಳಿದರು.
ಓದಿ: ಸತೀಶ್ ಜಾರಕಿಹೊಳಿ ಒಬ್ಬ ಉದ್ಯಮಿ, ವಿದ್ಯುತ್ ದರ ಏರಿಕೆಗೆ ಬೇಜವಾಬ್ದಾರಿ ಹೇಳಿಕೆ ಸಲ್ಲದು: ಶಾಸಕ ಬೆಲ್ಲದ್