ಮುದ್ದೇಬಿಹಾಳ: ಗೋವಾ ಹಾಗೂ ಮಹಾರಾಷ್ಟ್ರಕ್ಕೆ ಗುಳೆ ಹೋಗಿದ್ದ ಕೂಲಿ ಕಾರ್ಮಿಕರು ತಮ್ಮ ಹಕ್ಕು ಚಲಾಯಿಸಲು ಮುದ್ದೇಬಿಹಾಳ ತಾಲೂಕಿಗೆ ಬಂದಿಳಿದಿದ್ದಾರೆ.
ಪಟ್ಟಣದ ಬಸ್ ನಿಲ್ದಾಣದಲ್ಲಿ ಬೆಳಗ್ಗೆ 5 ಗಂಟೆಯಿಂದಲೇ ಕಾರ್ಮಿಕರು ಬಸ್, ಜೀಪ್, ಟೆಂಪೋಗಳ ಮೂಲಕ ಆಗಮಿಸಿದರು. ಕೋವಿಡ್-19 ಪರಿಸ್ಥಿತಿಯಲ್ಲಿ ಊರಿಗೆ ಕರೆದುಕೊಂಡು ಬರದೇ ಇರುವವರು ಇದೀಗ ತಾವೇ ಮುಂದೆ ಬಿದ್ದು ಊರಿಗೆ ಕರೆಯಿಸಿಕೊಂಡಿದ್ದಾರೆ. ಆದರೆ ನಮ್ಮ ಹಕ್ಕು ರದ್ದಾದೀತು ಎಂಬ ಭಯದಿಂದ ಮತದಾನ ಮಾಡಲು ಬಂದಿದ್ದೇವೆ ಎಂದು ಕಾರ್ಮಿಕರು ತಿಳಿಸಿದರು.
ಕೋಳೂರು, ಅಡವಿ ಸೋಮನಾಳ, ಕುಂಟೋಜಿ, ಯರಝರಿ, ಬಿದರಕುಂದಿ, ಢವಳಗಿ, ನೇಬಗೇರಿ, ಇಂಗಳಗೇರಿ, ಬಿಜ್ಜೂರ, ನಾಗರಬೆಟ್ಟ ಸೇರಿದಂತೆ ಇತರ ಊರುಗಳಿಗೆ ಗುಳೆ ಹೋದ ಕಾರ್ಮಿಕರು ಆಗಮಿಸಿದ್ದಾರೆ.
ದುಪ್ಪಟ್ಟು ಹಣ ಕೊಟ್ಟು ಕರೆಯಿಸಿದ ಅಭ್ಯರ್ಥಿಗಳು : ಈ ಬಾರಿ ದುಪ್ಪಟ್ಟು ಹಣ ಕೊಟ್ಟು ಮತದಾರರನ್ನು ಅಭ್ಯರ್ಥಿಗಳು ಕರೆ ತಂದಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. 1000 ರಿಂದ 1500 ಸಾವಿರ ರೂ.ವರೆಗೆ ಒಬ್ಬೊಬ್ಬ ಮತದಾರರಿಗೆ ಖರ್ಚು ಮಾಡಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.