ವಿಜಯಪುರ: ಬೇಟಿ ಬಚಾವೋ, ಬೇಟಿ ಪಡಾವೋ ಯೋಜನೆಯ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಗ್ರಾಮೀಣ ಮಟ್ಟದಲ್ಲಿ ಪಂಚಾಯಿತಿವಾರು ಯೋಜನೆಯ ಕುರಿತು ಮಾಹಿತಿ ಶಿಕ್ಷಣ ಸಂವಹನ ಪ್ರಚಾರ ಕಾರ್ಯಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ್ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಕೇಂದ್ರ ಸರ್ಕಾರದ ಯೋಜನೆಯಾದ ಬೇಟಿ ಬಚಾವೋ, ಬೇಟಿ ಪಡಾವೋ ಯೋಜನೆಯಡಿ ಜಿಲ್ಲಾ ಟಾಸ್ಕಪೋರ್ಸ್ ಸಮಿತಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿದ್ದ ವೈ.ಎಸ್ ಪಾಟೀಲ್, 220 ಗ್ರಾಮ ಪಂಚಾಯತ್ಗಳಿಗೆ, ನಗರದ 35 ವಾರ್ಡ್ಗಳಿಗೆ ತಾಲೂಕು ಮತ್ತು ಪಟ್ಟಣ ಪಂಚಾಯತ್ಗಳಲ್ಲಿ ಎಲ್.ಇ.ಡಿ ಒಳಗೊಂಡಿರುವ ವ್ಯಾನ್ ಮೂಲಕ ಸರ್ಕಾರದ ಪ್ರಚಾರ ಕಾರ್ಯಕ್ರಮವನ್ನು ಚುರುಕುಗೊಳಿಸುವಂತೆ ಸೂಚನೆ ನೀಡಿದರು. ಹೆಣ್ಣುಮಕ್ಕಳ ಲಿಂಗಾನುಪಾತವನ್ನು ಉತ್ತಮಗೊಳಿಸಲು ಪ್ರತಿ ತಿಂಗಳು ವಿವಿಧ ಇಲಾಖೆಗಳ ಸಹಕಾರದೊಂದಿಗೆ ಜಲ್ಲೆಯಲ್ಲಿ ಬೃಹತ್ ಆಂದೋಲನವನ್ನು ಹಮ್ಮಿಕೊಳ್ಳುವಂತೆ ಹೇಳಿದರು.
ಈ ಯೋಜನೆಯಡಿಯಲ್ಲಿರುವ ಉದ್ದೇಶಗಳನ್ನು ಎಲ್ಲ ಗ್ರಾಮೀಣ ಪ್ರದೇಶದಲ್ಲಿರುವ 18 ವರ್ಷದ ಒಳಗಿರುವ (9ನೇ ತರಗತಿಯಿಂದ ಪಿಯುಸಿವರೆಗಿನ) ವಿದ್ಯಾರ್ಥಿ/ವಿದ್ಯಾರ್ಥಿನಿಯರನ್ನು ಆಯ್ಕೆ ಮಾಡಿ ಈ ಯೋಜನೆ ಕುರಿತು ಪಂಚಾಯಿತಿವಾರು ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವಂತೆ ಶಿಕ್ಷಣಾಧಿಕಾರಿಗಳೊಂದಿಗೆ ಚರ್ಚಿಸಿದ ಜಿಲ್ಲಾಧಿಕಾರಿಗಳು, ಜಿಲ್ಲೆಯ ಪ್ರತಿಯೊಂದು ಅಂಗನವಾಡಿ ಕೆಂದ್ರ, ಸರ್ಕಾರಿ ಹಾಗೂ ಖಾಸಗಿ ವಾಹನ, ಸರ್ಕಾರಿ ಶಾಲೆ, ಸ್ತ್ರೀ ಶಕ್ತಿ ಯೋಜನೆ, ಮೊಬೈಲ್ ಮತ್ತು ಗಾಡಿಗಳಲ್ಲಿ ಮಗಳನ್ನು ಉಳಿಸಿ, ಮಗಳನ್ನು ಓದಿಸಿ ಎಂಬ ಲೋಗೋ, ಸ್ಪೀಕರ್, ಮತ್ತು ಕರಪತ್ರಗಳನ್ನು ಹಂಚಿರುವ ಕುರಿತು ವಿವರಣೆ ಪಡೆದುಕೊಂಡರು.
ಬೇಟಿ ಬಚಾವೋ, ಬೇಟಿ ಪಡಾವೋ ಕಾರ್ಯಕ್ರಮವು ಹಳ್ಳಿಯ ಜನರಿಗೆ ಸಹಾಯಕವಾಗಬೇಕು ಮತ್ತು ಕಾರ್ಯಕ್ರಮದ ಪ್ರತಿಯೊಂದು ಮಾಹಿತಿಯನ್ನು ಛಾಯಾಚಿತ್ರ, ವಿಡಿಯೋ ಕ್ಲಿಪ್ಪಿಂಗ್ಗಳನ್ನು ಸಂಗ್ರಹಿಸುವುದಾಗಿ ತಿಳಿಸಿದರು. ಸಭೆಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಸಿ.ಬಿ ಕುಂಬಾರ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ನಿರ್ಮಲಾ ಸುರಪುರ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಮಹೇಶ ಪೋತದಾರ, ಕಾನೂನು ಸೇವಾ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಶ್ರೇಣಿ ನ್ಯಾಯಾಧೀಶರು ನ್ಯಾ. ರವೀಂದ್ರ ಕಾರಬಾರಿ, ಸೇರಿದಂತೆ ಜಿಲ್ಲಾ ಮತ್ತು ತಾಲೂಕು ಮಟ್ಟದ ವಿವಿಧ ಇಲಾಖಾ ಅಧಿಕಾರಿಗಳು ಇದ್ದರು.