ವಿಜಯಪುರ: ನಾವು ಆಪರೇಷನ್ ಹಸ್ತ ಮಾಡುತ್ತಿಲ್ಲ, ಬದಲಿಗೆ ಬಿಜೆಪಿಯಲ್ಲಿ ಬೇಸತ್ತು ಬಂದವರನ್ನು ಸ್ವಾಗತಿಸುತ್ತಿದ್ದೇವೆ ಎಂದು ಬೃಹತ್ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ತಿಳಿಸಿದ್ದಾರೆ. ಕೆಲವು ನಾಯಕರನ್ನು ಕಾಂಗ್ರೆಸ್ಗೆ ಸೇರಿಸಿಕೊಳ್ಳಬಾರದು ಎಂದು ಕೈ ನಾಯಕರು ವರಿಷ್ಠರಿಗೆ ದೂರು ನೀಡಿದ ವಿಚಾರವಾಗಿ ಮಾತನಾಡಿ, ಅದನ್ನು ಪಕ್ಷದ ವರಿಷ್ಠರು ನೋಡಿಕೊಳ್ಳುತ್ತಾರೆ. ಎಐಸಿಸಿ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿ ಗಮನಿಸಿ ನಿರ್ಣಯ ತೆಗೆದುಕೊಳ್ಳುತ್ತಾರೆ ಎಂದರು.
ಆಲಮಟ್ಟಿ ಡ್ಯಾಂಗೆ ಗಂಗಾಪೂಜೆ ಹಾಗೂ ಬಾಗಿನ ಅರ್ಪಣೆ ವಿಚಾರವಾಗಿ ಮಾತನಾಡುತ್ತಾ, ಸಿಎಂ ಗಂಗಾಪೂಜೆ ಹಾಗು ಬಾಗಿನ ಅರ್ಪಣೆಗೆ ಬರಬೇಕೆಂಬ ಆಶಯವಿದೆ. ಆದಷ್ಟು ಬೇಗ ಅವರು ಆಗಮಿಸಬೇಕೆಂದು ಮನವಿ ಮಾಡಿಕೊಳ್ಳುತ್ತೇನೆ ಎಂದು ತಿಳಿಸಿದರು.
ನಂತರ ಕಾವೇರಿ ಜಲವಿವಾದ ಕುರಿತು ಸರ್ವಪಕ್ಷ ಸಭೆ ವಿಚಾರವಾಗಿ ಪ್ರತಿಕ್ರಿಯಿಸಿ, ಕಾವೇರಿ, ಮಹದಾಯಿ ನದಿ, ವಿವಾದ ಬಗ್ಗೆ ಚರ್ಚಿಸಲು ಸರ್ವಪಕ್ಷ ಸಭೆ ಕರೆದಿದ್ದೆವು. ಅಲ್ಲಿ ಕೃಷ್ಣಾ ವಿವಾದದ ಬಗ್ಗೆ ಚರ್ಚಿಸಲ್ಲ. ಕ್ಯಾಬಿನೆಟ್ನಲ್ಲಿ ಹಾಗೂ ಶಾಸಕರ ಪ್ರತ್ಯೇಕ ಸಭೆಯಲ್ಲಿ ಕೃಷ್ಣಾ ವಿಚಾರವಾಗಿ ಚರ್ಚೆ ಆಗಿದೆ ಎಂದರು. ಆಲಮಟ್ಟಿ ಎತ್ತರ ಹೆಚ್ಚಿಸುವ ಬಗ್ಗೆ ಹಾಗೂ ಭೂ ಪರಿಹಾರವನ್ನು ಮುಂದಿನ ವರ್ಷದಿಂದ ಜಾರಿಗೊಳಿಸಲು ಸಿಎಂ, ಡಿಸಿಎಂ ಒಪ್ಪಿಗೆ ನೀಡಿದ್ದಾರೆ ಎಂದು ಮಾಹಿತಿ ನೀಡಿದರು.
ಇಂಡಿಯಾ ಒಕ್ಕೂಟ, ಸ್ಟಾಲಿನ್ ಅವರನ್ನು ಮೆಚ್ಚಿಸಲು ತಮಿಳುನಾಡಿಗೆ ಕಾವೇರಿ ನೀರು ಬಿಟ್ಟಿದ್ದಾರೆ ಎಂಬ ಬಿಜೆಪಿ ಆರೋಪಕ್ಕೆ, ಈ ಹಿಂದೆಯೂ ನೀರು ಬಿಡಲಾಗಿತ್ತು. ಆಗಲೂ ಹಾಗೆಯೇ ಬಿಟ್ಟಿದ್ದರಾ? ಎಐಡಿಎಂಕೆ, ಡಿಎಂಕೆ ಮೆಚ್ಚಲು ನೀರು ಬಿಟ್ಟಿದ್ದರಾ?, 15 ಸಾವಿರ ಕ್ಯೂಸೆಕ್ ನೀರು ತಮಿಳುನಾಡಿಗೆ ಬಿಡುವಂತೆ ಸಿಡಬ್ಲೂಸಿ ಆದೇಶವಿದೆ. ನಾವು ಸರಿಯಾಗಿ ವಾದ ಮಂಡಿಸಿದಾಗ 10 ಸಾವಿರ ಕ್ಯೂಸೆಕ್ ನೀರು ಬಿಡಲು ಆದೇಶ ಮಾಡಿದೆ. ಇದನ್ನು ತಮಿಳುನಾಡಿನವರು ಒಪ್ಪಿಕೊಳ್ಳದೇ ಸಭೆಯಿಂದ ಎದ್ದು ಹೋಗಿದ್ದಾರೆ. ಪರಸ್ಪರ ಎರಡು ರಾಜ್ಯದವರು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದೇವೆ. ನಮ್ಮ ರಾಜ್ಯದ ಹಿತಾಸಕ್ತಿ ಸಲುವಾಗಿ ಬೇರೆ ರಾಜ್ಯದ ರಾಜಕೀಯ ಪಕ್ಷವನ್ನು ಓಲೈಸುವ ಪರಿಸ್ಥಿತಿ ಯಾರಿಗೂ ಬಂದಿಲ್ಲ, ಬರುವುದೂ ಇಲ್ಲ ಎಂದು ಹೇಳಿದರು.
ಬಳಿಕ ಚಂದ್ರಯಾನ 3 ಯಶಸ್ವಿ ಬಗ್ಗೆ ಪ್ರತಿಕ್ರಿಯೆ ನೀಡಿ, ಇಸ್ರೋದ ಪ್ರತಿಯೊಬ್ಬ ಸದಸ್ಯರಿಗೂ ಮತ್ತು ವಿಜ್ಞಾನಿಗಳಿಗೆ ಅಭಿನಂದನೆ ಸಲ್ಲಿಸಿದರು. ಆ.26ಕ್ಕೆ ಪ್ರಧಾನಿ ಮೋದಿ ಅವರ ಭೇಟಿ ಬಗ್ಗೆ ಕೇಳಿದ ಪ್ರಶ್ನೆಗೆ, ಚಂದ್ರಯಾನ3 ಯಶಸ್ವಿಗೆ ಶ್ರಮವಹಿಸಿದ ವಿಜ್ಞಾನಿಗಳಿಗೆ ಅಭಿನಂದನೆ ಸಲ್ಲಿಸಿ, ಸ್ಪೂರ್ತಿ ತುಂಬುವ ಕೆಲಸ ಪ್ರಧಾನಿಯಾಗಿ ಮಾಡುತ್ತಿದ್ದಾರೆ. ಅದರಲ್ಲಿ ತಪ್ಪಿಲ್ಲ ಎಂದು ಹೇಳಿದರು. ಲೋಕಸಭೆ ಚುನಾವಣೆ ಸಮಯದಲ್ಲಿ ಬರುತ್ತಿರುವುದು ಯಾವರೀತಿಯ ಪರಿಣಾಮ ಬೀರಲಿದೆ ಎಂಬ ಮಾಧ್ಯಮ ಪ್ರಶ್ನೆಗೆ, ಇದಕ್ಕೂ ರಾಜಕೀಯ ಬೆರೆಸುವುದು ತಪ್ಪು ಎಂದು ಹೇಳಿದ ಅವರು, ಈ ಹಿಂದೆ ಪ್ರಧಾನಿಗಳಾಗಿದ್ದ ಜವಾಹರಲಾಲ್ ನೆಹರು, ಅಟಲ್ ಬಿಹಾರಿ ವಾಜಪೇಯಿ ಅವರ ಕಾಲದಿಂದಲೂ ಇಸ್ರೋ ವಿಜ್ಞಾನಿಗಳಿಗೆ ಹುರಿದುಂಬಿಸುವ ಕೆಲಸ ಮಾಡಿಕೊಂಡು ಬರಲಾಗುತ್ತಿದೆ. ಇದೀಗಾ ಪ್ರಧಾನಿ ಮೋದಿ ಬರುತ್ತಿರುವದನ್ನು ಬಿಜೆಪಿ ಕಾಂಗ್ರೆಸ್ ಅಂತ ರಾಜಕೀಯ ಬೆರೆಸುವುದು ಸರಿಯಲ್ಲ ಎಂದರು.
ಇದನ್ನೂ ಓದಿ: ಮಂಡ್ಯ: ಕಾವೇರಿ ನದಿಗಿಳಿದು ರೈತರಿಂದ ಪ್ರತಿಭಟನೆ