ವಿಜಯಪುರ: ವಿಜಯಪುರ ನಗರ ಕ್ಷೇತ್ರದ ಅಭ್ಯರ್ಥಿ ಹಾಗೂ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಅವರಿಗೆ ಅವರ ಪೋಷಕರು ಬಸವಣ್ಣವರ ಹೆಸರು ಇಟ್ಟಿದ್ದಾರೆ. ಆದರೆ ಮಾಡುತ್ತಿರುವ ಕೆಲಸ ಮಾತ್ರ ಬಸವಣ್ಣವರ ವಿರೋಧಿ ನಿಲುವಾಗಿದೆ. ದೇಶಕ್ಕಾಗಿ ಪ್ರಧಾನಿ ಹುದ್ದೆ ನಿರಾಕರಿಸಿರುವ ಸೋನಿಯಾ ಗಾಂಧಿಯವರನ್ನು ವಿಷಕನ್ಯೆ ಎಂದು ಹೇಳಿರುವುದು ಖಂಡನೀಯ ಎಂದು ಕೆಪಿಸಿಸಿ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ ಎಂಬಿ ಪಾಟೀಲ್ ಹೇಳಿದರು.
ನಗರದ ಅವರ ನಿವಾಸದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅವರು ಶಾಸಕರಾದ ಮೇಲೆ ಕಳೆದ ಐದು ವರ್ಷಗಳಿಂದ ಅವರ ಹೇಳಿಕೆಗಳನ್ನು ನೋಡಿದರೆ ಗೊತ್ತಾಗುತ್ತದೆ, ಅವರು ಬಳಸುವ ಶಬ್ಧಗಳು ಅಸಂಬದ್ಧ, ಅಶ್ಲೀಲ ಹೇಳಿಕೆಗಳೇ ಇರುತ್ತವೆ. ರಾಹುಲ್ ಗಾಂಧಿಯವರನ್ನು ಹುಚ್ಚ ಎಂದು ಸಂಬೋಧಿಸುವುದು ಎಷ್ಟು ಸೂಕ್ತ? ಜನ ಅವರನ್ನು ಯಾವ ರೀತಿ ಕರೆಯುತ್ತಾರೆ ಎಂಬುದನ್ನು ಅವರು ಆತ್ಮಾಲೋಕನ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಯತ್ನಾಳ್ ಈ ಹಿಂದೆ ಮಾಜಿ ಸಿಎಂ ಯಡಿಯೂರಪ್ಪ ಹಾಗೂ ಅವರ ಪುತ್ರ ವಿಜಯೇಂದ್ರ ವಿರುದ್ಧ ಟೀಕೆ ಮಾಡುತ್ತಲೇ ಬಂದಿದ್ದರು. ಕೆಟ್ಟ ಶಬ್ಧಗಳನ್ನು ಬಳಸಿದ್ದಾರೆ. ಇಲ್ಲಿ ಮುಸ್ಲಿಂ ಬಾಂಧವರನ್ನು ದೂರವಿಟ್ಟಿದ್ದಾರೆ. ಶಾಸಕರಾದವರು ಎಲ್ಲ ಸಮುದಾಯವರನ್ನು ತೆಗೆದುಕೊಂಡು ಹೋಗುವ ಕೆಲಸ ಮಾಡಬೇಕು ಎಂದರು.
ಜಾತಿ ಧರ್ಮದ ಮಧ್ಯೆ ದ್ವೇಷ ಬಿತ್ತುವ ಕೆಲಸ ಮಾಡುತ್ತಿದ್ದಾರೆ. ಸೋನಿಯಾ ಗಾಂಧಿಯನ್ನು ವಿಷಕನ್ಯೆ, ಪಾಕಿಸ್ತಾನದ ಏಜೆಂಟ್ ಎಂದಲ್ಲ ಸಂಭೋದಿಸಿದ್ದಾರೆ. ಸೋನಿಯಾ ಗಾಂಧಿಯವರು ರಾಜೀವ ಗಾಂಧಿಯವರನ್ನು ಮದುವೆಯಾಗಿ ಭಾರತ ದೇಶದ ಸೊಸೆಯಾಗಿದ್ದಾರೆ. ನಿರಂತರವಾಗಿ ಕಾಂಗ್ರೆಸ್ ಪಕ್ಷವನ್ನು ಬೆಳೆಸುವ ಕೆಲಸ ಮಾಡಿದ್ದಾರೆ. ಎರಡು ಬಾರಿ ಅವರಿಗೆ ದೇಶದ ಪ್ರಧಾನ ಮಂತ್ರಿಯಾಗುವ ಅವಕಾಶವಿತ್ತು. ಅದನ್ನು ತ್ಯಾಗ ಮಾಡಿ ಮನಮೋಹನ ಸಿಂಗ್ ಅವರನ್ನು ಪ್ರಧಾನಿಯಾಗಿ ಮಾಡಿದರು. ಎಲ್ಲರ ಜತೆ ಪ್ರೀತಿ ವಿಶ್ವಾಸದಿಂದ ನಡೆದುಕೊಂಡಿದ್ದಾರೆ. ಅವರನ್ನು ಯತ್ನಾಳ್ ಟೀಕಿಸಿದ್ದಾರೆ. ಅವರು ಐದು ವರ್ಷದ ನೀಡಿದ ಹೇಳಿಕೆಗಳನ್ನು ಕ್ರೋಢೀಕರಿಸಿದರೆ, ಅದೇ ಒಂದು ದೊಡ್ಡ ಗ್ರಂಥವಾಗುತ್ತದೆ ಎಂದು ಎಂ ಬಿ ಪಾಟೀಲ್ ಲೇವಡಿ ಮಾಡಿದರು.
ತಮ್ಮ ಪತ್ನಿ ಆಶಾ ಪಾಟೀಲ್ ಅವರು ಚುನಾವಣೆ ಪ್ರಚಾರದ ವೇಳೆ ಅವಮಾನ ಮಾಡಿದ ಪ್ರಕರಣಕ್ಕೆ ಸಂಂಬಧಿಸಿದಂತೆ ಮಾತಾಡಿದ ಎಂ.ಬಿ. ಪಾಟೀಲ್, ಕೆಲ ಪುಂಡರು ಬೈಕ್ನಲ್ಲಿ ಬಂದು ಬೈಕ್ ಹಾರ್ನ್ ಹೊಡೆದು ತೊಂದರೆ ನೀಡಿದ್ದಾರೆ. ಇದೇ ರೀತಿ ದೇವಾಪುರದಲ್ಲಿ ಯುವಕನೊಬ್ಬ ಚುನಾವಣಾ ಪ್ರಚಾರ ವೇಳೆ ನೀರಾವರಿ ವಿಷಯವಾಗಿ ಪ್ರಸ್ತಾಪ ಮಾಡಿದ್ದಾನೆ. ಇದು ಗ್ರಾಮ ಪಂಚಾಯತ್ ಮಟ್ಟದ ವಿಷಯವಾಗಿದೆ. ಅದರನ್ನು ಏಕೆ ಕೇಳುತ್ತಿದ್ದೀಯಾ ಎಂದು ಗ್ರಾಮದ ಹಿರಿಯರೊಬ್ಬರು ಪ್ರಶ್ನಿಸಿದರು. ಆದರೂ ಸಹ ತಾವೇ ಖುದ್ದು ಆ ಯುವಕನನ್ನು ಕರೆದು ಮಾತನಾಡಿಸಿದ್ದೇನೆ ಎಂದರು.
ವಿಜುಗೌಡಗೆ ಯಾರೋ ಮಂತ್ರ ಕಲಿಸಿದ್ದಾರೆ: ಬಬಲೇಶ್ವರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತನ್ನ ಪ್ರತಿ ಸ್ಪರ್ಧಿ ವಿಜುಗೌಡ ಪಾಟೀಲ ಅವರು ತಾವು ಮೂರು ಬಾರಿ ಈ ಕ್ಷೇತ್ರದಿಂದ ಚುನಾವಣೆ ಸೋತಿದ್ದೇನೆ. ಒಮ್ಮೆ ಗೆಲ್ಲಿಸಿ ಎಂದು ಮೊಸಳೆ ಕಣ್ಣೀರು ಹಾಕಿದ್ದು ಏಕೆ? ನಾನು ಅಭಿವೃದ್ಧಿ ಕೆಲಸ ಮಾಡಿದ್ದೇನೆ, ನೀನು ಏನು ಮಾಡಿದ್ದೀಯಾ? ಯಾರೋ ಆತನಿಗೆ ಮಂತ್ರ ಕಲಿಸಿದ್ದಾರೆ. ಗೂಂಡಾಗಿರಿ ಮಾಡಿದ್ದು, ಎಷ್ಟು ಮನೆ ಮುರಿದಿದ್ದೀರಿ, ಎಷ್ಟು ಮನೆ ಹಾಳು ಮಾಡಿದ್ದೀರಿ ಎನ್ನುವುದು ಬಬಲೇಶ್ವರ ಮತಕ್ಷೇತ್ರದ ಜನರಿಗೆ ಗೊತ್ತಿದೆ. ಕಾಲು ಮುಗಿಯುವುದನ್ನು ಬಿಟ್ಟು ಈ ಕ್ಷೇತ್ರದಲ್ಲಿ ಇಂಥ ಕೆಲಸ ಮಾಡಿದ್ದೀನಿ, ನನಗೆ ಮತ ಹಾಕಿ ಎಂದು ಮನವಿ ಮಾಡಿಕೊ ಎಂದು ಎಂ ಬಿ ಪಾಟೀಲ್ ಹರಿಹಾಯ್ದರು.
ಇದನ್ನೂ ಓದಿ: ರಾಜ್ಯಕ್ಕೆ ಪ್ರಿಯಾಂಕಾ ಗಾಂಧಿಯನ್ನು ಕರೆಸಿ ದೋಸೆ ಮಾಡಿಸಿದರೆ ಜನ ಮತ ಹಾಕಲ್ಲ: ಅಣ್ಣಾಮಲೈ ವ್ಯಂಗ್ಯ