ವಿಜಯಪುರ: ಮದುವೆ ಆಮಂತ್ರಣ ಪತ್ರಿಕೆಯಲ್ಲಿ ಪೌರತ್ವ ಕಾಯ್ದೆ ಕುರಿತು ಪ್ರಚಾರ ಮಾಡಿದ್ದ ಜೋಡಿಯೊಂದು ಇಂದು ದಾಂಪತ್ಯ ಜೀವನಕ್ಕೆ ಕಾಲಿರಿಸಿದೆ. ವಧು ಸಂಜೀವಿನಿ, ವರ ಈರಯ್ಯ ಅವರ ವಿವಾಹ ಇಂದು ನಗರದಲ್ಲಿ ನಡೆಯಿತು.
ನಾವು ಪೌರತ್ವ ಕಾಯ್ದೆ ಬೆಂಬಲಿಸುತ್ತೇವೆ ಎಂದು ಆಮಂತ್ರಣ ಪತ್ರಿಕೆಯಲ್ಲಿ ವಧುವಿನ ಹಿರೇಮಠ ಕುಟುಂಬಸ್ಥರು ಮುದ್ರಿಸಿದ್ದರು. ಪೌರತ್ವ ಕಾಯ್ದೆ ಬೆಂಬಲಿಸೋಣ ಎಂದು ಜಾಗೃತಿ ಮೂಡಿಸಿದ್ದರು.
ವಧುವಿನ ಸಹೋದರ ವಿಜಯ ಮಹಾಂತೇಶ ಅಣ್ಣಯ್ಯ ಹಿರೇಮಠ ಅವರು, ಕಾಯ್ದೆ ಬಗ್ಗೆ ಅರಿವು ಮೂಡಿಸಲು ಈ ಪ್ರಯತ್ನ ಮಾಡಿದ್ದಾರೆ. ದೇಶದ ಜನರ ಹಕ್ಕುಗಳನ್ನು ಈ ಕಾಯ್ದೆ ಕಸಿದುಕೊಳ್ಳುವುದಿಲ್ಲ. ಬೇರೆ ದೇಶದಲ್ಲಿ ಕಿರುಕುಳಕ್ಕೆ ಒಳಗಾದವರಿಗೆ ಮಾತ್ರ ಪೌರತ್ವ ನೀಡಲಾಗುತ್ತದೆ. ಇದರಿಂದಾಗಿ ದೇಶದ ಜನ ಆತಂಕಪಡಬೇಕಿಲ್ಲ. ಎಲ್ಲರೂ ಕಾಯ್ದೆ ಬೆಂಬಲಿಸೋಣ ಎಂದು ಅವರು ಮನವಿ ಮಾಡಿದರು.