ವಿಜಯಪುರ: ನಮ್ಮ ದೇಶದಲ್ಲಿ ಪ್ರಕೃತಿ ಆರಾಧನೆಗೆ ಹೆಚ್ಚು ಮಹತ್ವ. ನಮ್ಮ ಪೂರ್ವಜರು ಕಲ್ಲು-ಮಣ್ಣಿನಲ್ಲಿಯೇ ದೈವತ್ವವನ್ನು ಕಂಡವರು. ಅದೇ ರೀತಿ ಈಗಲೂ ಅಂತಹದ್ದೇ ವಿಶೇಷ ಆಚರಣೆ ಉತ್ತರ ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕ ಭಾಗದಲ್ಲಿ ನಡೆದುಕೊಂಡು ಬಂದಿದೆ. ಈ ಹಬ್ಬದ ಹೆಸರು 'ಮಣ್ಣೆತ್ತಿನ ಅಮಾವಾಸ್ಯೆ'. ಇದರ ವಿಶೇಷತೆ ಅಂದ್ರೆ ಮಣ್ಣಿನಿಂದ ಎತ್ತುಗಳನ್ನು ತಯಾರಿಸಿ ಪೂಜಿಸುವುದಾಗಿದೆ.
ಕೆರೆಯಿಂದ ತಂದ ಮಣ್ಣಿನಿಂದ ಎತ್ತುಗಳನ್ನು ತಯಾರಿಸಿ ಪೂಜಿಸುವುದು ಈ ಹಬ್ಬದ ವಿಶೇಷ. ಮಣ್ಣಿಗೂ-ಎತ್ತಿಗೂ ಅವಿನಾಭಾವ ಸಂಬಂಧವಿದೆ. ಅಲ್ಲದೆ ಮಣ್ಣಿನ ಎತ್ತಿನ ಮೂರ್ತಿಗಳನ್ನು ಪೂಜಿಸಿದರೆ ಸಕಾಲದಲ್ಲಿ ಮಳೆ-ಬೆಳೆ ಆಗುತ್ತದೆ ಎನ್ನುವ ನಂಬಿಕೆ ರೈತರದ್ದು. ತಮ್ಮ ಬದುಕಿಗೆ ಆಸರೆಯಾಗಿರುವ ಎತ್ತುಗಳನ್ನು ರೈತಾಪಿ ಜನರು ಪೂಜಿಸಿ ಸಂಭ್ರಮಪಡುವ ಈ ಹಬ್ಬ ಕಾರಹುಣ್ಣಿಮೆಯ ನಂತರ ಬರುತ್ತದೆ.
ಜೋಡೆತ್ತುಗಳನ್ನು ನೋಡುವುದೇ ಸೊಗಸು: ಮಾರುಕಟ್ಟೆಯಿಂದ ತಂದ ಮಣ್ಣೆತ್ತುಗಳನ್ನು ಸಿಂಗರಿಸಿದ ಜೋಡೆತ್ತುಗಳನ್ನು ನೋಡುವುದೇ ಒಂದು ಸೊಗಸು. ನಂತರ ದೇವರ ಜಗುಲಿಯ ಮೇಲಿಟ್ಟು ಪೂಜೆಗೆ ಅಣಿಯಾಗುವ ಹೊತ್ತಿಗೆ ಮನೆಯ ಹೆಣ್ಣುಮಕ್ಕಳು ಹೋಳಿಗೆ, ಕಡಬು ಮುಂತಾದ ಸವಿಸವಿ ಅಡುಗೆಯನ್ನು ಸಿದ್ಧಪಡಿಸಿರುತ್ತಾರೆ. ಮನೆಯ ದನ-ಕರುಗಳ ಮೈತೊಳೆದು ಪೂಜೆಗೆ ಸಿಂಗರಿಸುತ್ತಾರೆ. ಮಣ್ಣೆತ್ತುಗಳಿಗೆ ಕಾಯಿ, ಕರ್ಪೂರ, ಊದಬತ್ತಿ ಬೆಳಗಿ ಎಡೆ ಹಿಡಿದು ಪೂಜಿಸುತ್ತಾರೆ.
ಎತ್ತುಗಳಿಗೆ ಆರತಿ ಬೆಳಗಿ ಸಂಭ್ರಮ: ಸಕಲ ಜೀವರಾಶಿಗಳಿಗೆ ಅನ್ನ ಹಾಕುವ ಭೂತಾಯಿಗೆ ಈ ಮೂಲಕ ಪೂಜೆ ಸಲ್ಲಿಸಿ ಕೃತಜ್ಞತೆ ಅರ್ಪಿಸುತ್ತಾರೆ. ಹೊಸ ಬಟ್ಟೆಗಳನ್ನು ತೊಟ್ಟು ಊರಿನಲ್ಲಿ ದೇವಸ್ಥಾನಗಳಿಗೆ ಕಾಯಿ, ಕರ್ಪೂರದೊಂದಿಗೆ ಹೋಗಿ ಎಡೆ ಹಿಡಿದು ಬಂದು ಒಟ್ಟಾಗಿ ಕುಳಿತು ಊಟ ಮಾಡುತ್ತಾರೆ. ಸಂಜೆ ಹೆಣ್ಣು ಮಕ್ಕಳು ಮನೆಮನೆಗೆ ತೆರಳಿ ಪೂಜಿಸಲ್ಪಟ್ಟ ಎತ್ತುಗಳಿಗೆ ಆರತಿ ಬೆಳಗಿ ಸಂಭ್ರಮಿಸುತ್ತಾರೆ.
ಈ ಬಾರಿ ಅಷ್ಟು ಬೇಡಿಕೆ ಇಲ್ಲ: ಈ ಹಬ್ಬ ಮಣ್ಣಿನ ಮಕ್ಕಳಿಗೆ ಅತ್ಯಂತ ಪವಿತ್ರವಾದುದು. ಇಂತಹ ಪ್ರಸಿದ್ಧ ಹಬ್ಬದ ಸಡಗರದಲ್ಲಿದ್ದ ವಿಜಯಪುರ ನಗರದ ಜನರು ಮಣ್ಣೆತ್ತುಗಳನ್ನು ಖರೀದಿಸುವಲ್ಲಿ ಬ್ಯುಸಿಯಾಗಿದ್ದರು. 'ಮಣ್ಣೆತ್ತುಗಳು ಈ ಬಾರಿ ದುಬಾರಿಯಾಗಿದ್ದು, ಅತಿ ಚಿಕ್ಕವು 50 ರಿಂದ ಪ್ರಾರಂಭವಾಗಿ 1500 ರೂ.ಗೆ ಮಾರಾಟವಾಗುತ್ತಿವೆ. ಈ ಬಾರಿ ಅಷ್ಟು ಬೇಡಿಕೆ ಇಲ್ಲ' ಎನ್ನುತ್ತಾರೆ ಮಣ್ಣೆತ್ತುಗಳ ತಯಾರಕರಾದ ಕಾಸುಂಡೆ.
'ಇವತ್ತು ಮಣ್ಣೆತ್ತಿನ ಅಮಾವಾಸ್ಯೆ ಹಬ್ಬವಿದೆ. ಈ ಹಬ್ಬದಲ್ಲಿ ನಾವು ಮಣ್ಣಿನಿಂದ ತಯಾರಿಸಿದಂತಹ ಎತ್ತುಗಳನ್ನು ತರುತ್ತೇವೆ. ಅವುಗಳನ್ನು ಮನೆಯ ಜಗುಲಿ ಮೇಲಿಟ್ಟು ಬಣ್ಣ ಹಾಕಿ ಸಿಂಗರಿಸಿರುತ್ತೇವೆ. ಅದನ್ನು ನೋಡುವುದೇ ಚೆಂದ. ಅವುಗಳಿಗೆ ಅರಿಶಿಣ-ಕುಂಕುಮ ಹಚ್ಚಿ ಹೋಳಿಗೆ, ಕಡಬು ಇಟ್ಟು ಕಾಯಿ, ಕರ್ಪೂರ, ಊದಬತ್ತಿ, ಲೋಬಾನ ಹಾಕಿ ಪೂಜಿಸುತ್ತೇವೆ' ಎಂದು ಗೃಹಿಣಿ ಪ್ರತಿಭಾ ಹಬ್ಬದ ಕುರಿತು ಮಾಹಿತಿ ಹಂಚಿಕೊಂಡರು.
ಓದಿ: ಬಂಡೀಪುರ ಕಾಡಲ್ಲಿ ರಸ್ತೆ ಅಗಲೀಕರಣ, ವಿಭಜಕಕ್ಕೆ ಶಾಸಕರ ಪತ್ರ.. ಪರಿಸರ ಪ್ರೇಮಿಗಳಿಂದ ಆಕ್ಷೇಪ