ಮುದ್ದೇಬಿಹಾಳ: ಜೆಡಿಎಸ್‌ನಿಂದ ಅಧಿಕೃತ ಅಭ್ಯರ್ಥಿಯಾಗಿ ಚುನಾವಣೆ ಎದುರಿಸಿ ಪುರಸಭೆಯಲ್ಲಿ ಸದಸ್ಯೆಯಾಗಿರುವ ಪ್ರತಿಭಾ ಅಂಗಡಗೇರಿ ಅವರನ್ನು ಕಾಂಗ್ರೆಸ್‌ಗೆ ಸೇರ್ಪಡೆ ಮಾಡಿಕೊಳ್ಳುವ ಮುನ್ನ ಅವರನ್ನು ನಮ್ಮ ಪಕ್ಷದಿಂದ ರಾಜೀನಾಮೆ ಕೊಡಿಸಿ ನಂತರ ತಮ್ಮ ಪಕ್ಷಕ್ಕೆ ಮತ್ತೊಮ್ಮೆ ಚುನಾಯಿತ ಸದಸ್ಯರನ್ನಾಗಿ ಮಾಡಿಸಿ ಕಾಂಗ್ರೆಸ್ ಸದಸ್ಯೆ ಎಂದು ಹೇಳಿಕೊಳ್ಳಲಿ ಎಂದು ಜೆಡಿಎಸ್ ಪಕ್ಷದ ರಾಜ್ಯ ಮಹಿಳಾ ಘಟಕದ ಕಾರ್ಯಾಧ್ಯಕ್ಷೆ ಮಂಗಳಾದೇವಿ ಬಿರಾದಾರ ಹೇಳಿದ್ದಾರೆ.
ಪಟ್ಟಣದ ತಮ್ಮ ನಿವಾಸದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಹೋದರಿ ಅಂಗಡಗೇರಿ ಅವರಿಗೆ ವಾರ್ಡ್ನಲ್ಲಿ ಜೆಡಿಎಸ್ ಪಕ್ಷದವರು ಎಂಬ ಕಾರಣದಿಂದಲೇ ಮತದಾರರು ಮತ ಹಾಕಿದ್ದಾರೆ ಹೊರತು ಬೇರೆ ಯಾವುದೇ ಉದ್ದೇಶದಿಂದಲ್ಲ. ಸದ್ಯಕ್ಕೆ ಕಾಂಗ್ರೆಸ್-ಪಕ್ಷೇತರರ ನೆರವಿನೊಂದಿಗೆ ಅಧ್ಯಕ್ಷರಾಗಿದ್ದಾರೆ. ಇದಕ್ಕಾಗಿ ಕಾಂಗ್ರೆಸ್ಸಿಗರನ್ನು ಅಭಿನಂದಿಸುವೆ ಎಂದರು.
ಕೆಲವರು ನಮ್ಮ ಅಭ್ಯರ್ಥಿಯ ಮೇಲೆ ಒತ್ತಡ ಹೇರಿ ಕಾಂಗ್ರೆಸ್ ಸೇರ್ಪಡೆಯಾಗಿದ್ದೇನೆ ಎಂದು ಹೇಳುವಂತೆ ಬಲವಂತ ಮಾಡುತ್ತಿರುವುದು ಕೀಳುಮಟ್ಟದ ರಾಜಕೀಯವಾಗಿದೆ ಎಂದು ಮಾಜಿ ಶಾಸಕ ನಾಡಗೌಡರ ವಿರುದ್ಧ ಪರೋಕ್ಷವಾಗಿ ಹರಿಹಾಯ್ದರು.
ಮುದ್ದೇಬಿಹಾಳ ಮತಕ್ಷೇತ್ರದಲ್ಲಿ ರಾಜಕೀಯ ಎನ್ನುವುದು ತಾನು ಆರ್ಥಿಕವಾಗಿ ಬೆಳೆದು ಇನ್ನೊಬ್ಬರನ್ನು ಕಂಗಾಲು ಮಾಡುವುದಾಗಿದೆ. ಇಂತಹ ರಾಜಕೀಯಕ್ಕೆ ಇಂದಿನ ರಾಜಕಾರಣಿಗಳು ಮುಗಿಬಿದ್ದಿರುವುದು ನಾಚಿಕೆಗೇಡಿನ ಸಂಗತಿ ಎಂದ ಅವರು, ಪುರಸಭೆ ಚುನಾಯಿತ ಸದಸ್ಯರಲ್ಲಿ ಇಬ್ಬರು ಜೆಡಿಎಸ್ ಪಕ್ಷದಿಂದ ಆಯ್ಕೆಯಾಗಿದ್ದಾರೆ. ಇವರಲ್ಲಿ ಯಾರೊಬ್ಬರೂ ಕಾಂಗ್ರೆಸ್‌ಗೆ ಸೇರಿಲ್ಲ ಎಂದು ಸ್ಪಷ್ಟಪಡಿಸಿದರು.
ಜೆಡಿಎಸ್ ಜಿಲ್ಲಾ ಕಾರ್ಯಾಧ್ಯಕ್ಷ ಗುರುಪ್ರಸಾದ್ ದೇಶಮುಖ್ ಮಾತನಾಡಿ, ನಾಲತವಾಡ ಪಪಂ ಅಧ್ಯಕ್ಷ ಸ್ಥಾನಕ್ಕೆ ಅಧಿಕೃತವಾಗಿ ಜೆಡಿಎಸ್‌ನಿಂದ ಆಯ್ಕೆಯಾದವರು ಇದ್ದಾರೆ. ಆದರೆ ಭವಿಷ್ಯದ ದೃಷ್ಟಿಯಿಂದ ನಾವು ಹೆಚ್ಚು ತಲೆ ಕೆಡಿಸಿಕೊಂಡಿಲ್ಲ. ನಮಗೂ ವಿರೋಧಿಗಳಂತೆ ಮಾಡಲು ಬರುತ್ತಿತ್ತು. ಆದರೆ ದೇಶಮುಖರ ಮನೆತನದಲ್ಲಿ ಅಂತಹ ಸಂಸ್ಕಾರ ಇಲ್ಲ ಎಂದು ಹೇಳಿದರು.