ವಿಜಯಪುರ : ಇದೇ ಮೊದಲ ಬಾರಿಗೆ ರಾಜಕೀಯ ಪಕ್ಷಗಳ ಹೆಸರು ಹೇಳಿ ದೈವ ಭವಿಷ್ಯ ನುಡಿದಿದ್ದು, ರಾಜಕಾರಣಿಗಳಿಗೆ ಶಾಕ್ ನೀಡಿದೆ. ಬಿಜೆಪಿ ಹಾಗೂ ಕಾಂಗ್ರೆಸ್ ನಡುವಿನ ತಿಕ್ಕಾಟದಿಂದ ರಾಜ್ಯ ರಾಜಕೀಯ ಅಲ್ಲೋಲ್ಲ ಕಲ್ಲೋಲ ಆಗಲಿದೆ ಎಂದು ಮಕಣಾಪುರದ ದೈವ ಕಾರ್ಣಿಕ ನುಡಿದಿದೆ.
ಪ್ರತಿ ವರ್ಷ ನಡೆಯುವ ಚಡಚಣ ತಾಲೂಕಿನ ಮಕಣಾಪುರದ ಶ್ರೀ ಸೋಮಲಿಂಗ ದೇವರ ಜಾತ್ರೆಯ ಕೊನೆ ದಿನ ನಡೆಯುವ ಕಾರ್ಣಿಕ ಹೇಳಿಕೆಯಲ್ಲಿ ಸಿದ್ದಿ ಪುರುಷ ಕಲ್ಲೂರ ಸಿದ್ಧ ರಾಜಕೀಯ ಭವಿಷ್ಯ ನುಡಿದು ಅಚ್ಚರಿ ಮೂಡಿಸಿದ್ದಾರೆ. ಇದೇ ಮೊದಲ ಬಾರಿ ರಾಜಕೀಯ ಪಕ್ಷಗಳ ಹೆಸರು ಬಳಸಿ ಭವಿಷ್ಯ ನುಡಿದ್ದಾರೆ. ಕಾಂಗ್ರೆಸ್-ಬಿಜೆಪಿ ಪಕ್ಷಗಳ ಹೆಸರು ಹೇಳಿ ದೈವ ನುಡಿದ ಭವಿಷ್ಯ ಕೇಳಿ ಭಕ್ತರು ದಂಗಾಗಿದ್ದಾರೆ.
ಶಿವನ ಅವತಾರ ಸೋಮಲಿಂಗ ದೇವರ ಸೇವಕನಾಗಿರುವ ಪವಾಡ ಪುರುಷ ಕಲ್ಲೂರುಸಿದ್ಧ ಭವಿಷ್ಯವನ್ನು ಜನರು ನಂಬುತ್ತಾರೆ. ನಾಲಿಗೆ ಮೇಲೆ ಶಿವನೆ ಕುಳಿತು ಭವಿಷ್ಯ ನುಡಿಯುತ್ತಾನೆ ಎಂಬ ನಂಬಿಕೆಯನ್ನು ಭಕ್ತರು ಹೊಂದಿದ್ದಾರೆ. ಕೈಯ್ಯಲ್ಲಿ ಬೆಳ್ಳಿ ತ್ರಿಶೂಲ, ಮುಖಕ್ಕೆ ದೇವರ ಮುಖವಾಡ ಧರಿಸಿ ಕಾರ್ಣಿಕ ನುಡಿಯಲಾಗುತ್ತದೆ.
ಕಲ್ಲೂರ ಸಿದ್ಧ ಹೇಳಿದ್ದೇನು? : ಕಾಂಗ್ರೆಸ್-ಬಿಜೆಪಿ ತಾ ಮುಂದು ನಾ ಮುಂದು ಎನ್ನುತ್ತವೆ, ಈ ಎರಡು ಪಕ್ಷಗಳ ನಡುವೆ ಭಾರಿ ತಿಕ್ಕಾಟ ನಡೆಯಲಿದೆ. ಜಗತ್ತೇ ಅಲ್ಲೋಲ ಕಲ್ಲೋಲವಾಗಲಿದೆ. ಬಿಜೆಪಿ, ಜನರಿಗೆ ಹೊಂದಿಕೊಂಡು ಹೋದರೆ ನಿಶಾನೆ (ಧ್ವಜ/ಗೆಲುವು) ಹಚ್ತೇನೆ, ಇಲ್ಲಂದ್ರೆ ಕಡಿದು ಮೂರು ತುಂಡು ಮಾಡೀನಿ. ಬಿಜೆಪಿ ಜನರೊಂದಿಗೆ ಹೊಂದಾಣಿಕೆ ಮಾಡಿಕೊಂಡು ಹೋದ್ರೆ ಗೆಲುವು ಸಾಧ್ಯ ಎಂದ ದೈವ ಎಚ್ಚರಿಕೆ ನೀಡಿದೆ.
ಮುಂದುವರೆದು ಕಾರ್ಣಿಕ ನುಡಿದ ಸಿದ್ದಿಪುರುಷ ಕಲ್ಲೂರ ಸಿದ್ಧ ಭೂಕಂಪನದ ಬಗ್ಗೆ ಸಹ ಭವಿಷ್ಯ ನುಡಿದಿದ್ದಾರೆ. ನಾಲ್ಕು ಮೂಲೆ ಸೋಸಿ (ಶೋಧಿಸಿ) ನೋಡುದ್ರಾಗ ಕತ್ತಲೆ ಬಿತ್ತಲೆಯಾಗುತ್ತದೆ. ಭೂತ್ಯಾನ ಹಚ್ಚಿ ಬಯಲು ಮಾಡಿದ್ರ ಎರಡು ಮೂಲೆ ತೊಟ್ಟಲಿಟ್ಟು ತೂಗಿತು. ಎರೆದು ಭಾಗದಲ್ಲಿ ಭೂಕಂಪನ ಶತಸಿದ್ಧ ಎಂದು ದೈವ ನುಡಿದಿದೆ.
ಇದನ್ನೂ ಓದಿ: ಆವಾಸ್ ಯೋಜನೆಯಡಿಯಲ್ಲಿ ಮೂರು ಕೋಟಿ ಮನೆಗಳ ನಿರ್ಮಾಣ : ಪ್ರಧಾನಿ ಮೋದಿ