ವಿಜಯಪುರ: ಭೀಮಾ ತೀರದಲ್ಲಿ ಚಿನ್ನದ ವ್ಯಾಪಾರಿಗೆ 5 ಕೋಟಿ ರೂ. ಬೇಡಿಕೆ ಇಟ್ಟ ಪ್ರಕರಣದಲ್ಲಿ ಹಿಂದಿರುವವರ ಹೆಸರನ್ನು ಅವಶ್ಯ ಬಿದ್ದರೆ ಬಹಿರಂಗ ಪಡಿಸುವುದಾಗಿ ಈ ಪ್ರಕರಣದ ಆರೋಪಿ ಮಹಾದೇವ ಸಾಹುಕಾರ ಭೈರಗೊಂಡ ಎಚ್ಚರಿಸಿದ್ದಾರೆ.
ಚಡಚಣದ ಚಿನ್ನದ ವ್ಯಾಪಾರಿ ನಾಮದೇವ ಡಾಂಗೆಗೆ ಭೀಮಾ ತೀರದ ಹಂತಕ ಬಾಗಪ್ಪ ಹರಿಜನ, ಕಾಂತುಗೌಡ ಪಾಟೀಲ ಹಾಗೂ ಮಹಾದೇವ ಸಾಹುಕಾರ ಭೈರಗೊಂಡ ಜೀವ ಬೆದರಿಕೆ ಹಾಕಿ 5 ಕೋಟಿ ರೂ ಇಲ್ಲವೇ 3 ಕೆಜಿ ಚಿನ್ನ ನೀಡಬೇಕು ಎಂದು ಬೇಡಿಕೆ ಇಟ್ಟಿದ್ದಾರೆ ಎಂದು ದೂರು ದಾಖಲಾಗಿತ್ತು.ಈ ಪ್ರಕರಣ ಭೀಮಾ ತೀರದಲ್ಲಿ ಮತ್ತೆ ಸದ್ದು ಮಾಡಿತ್ತು.
ಹಣದ ಬೇಡಿಕೆ ಇಟ್ಟಿದ್ದ ಪ್ರಕರಣದಲ್ಲಿ ಮೂರನೇ ಆರೋಪಿಯಾಗಿದ್ದ ಮಹಾದೇವ ಸಾಹುಕಾರ ಭೈರಗೊಂಡ ಜೈಲುವಾಸ ಅನುಭವಿಸಿ ಜಾಮೀನಿನ ಮೇಲೆ ಹೊರಗಿದ್ದಾರೆ. ಇನ್ನೊಬ್ಬ ಆರೋಪಿ ಬಾಗಪ್ಪ ಹರಿಜನ ಸಹ ಬಂಧನಕ್ಕೊಳಗಾಗಿ ಜೈಲು ವಾಸ ಅನುಭವಿಸುತ್ತಿದ್ದಾನೆ. ಈ ಪ್ರಕರಣದ ಎ-1 ಆರೋಪಿ ಕಾಂತುಗೌಡ ಪಾಟೀಲ ತಲೆ ಮರೆಸಿಕೊಂಡಿದ್ದಾನೆ. ಜಾಮೀನಿನ ಮೇಲೆ ಬಿಡುಗಡೆಯಾಗಿರುವ ಮಹಾದೇವ ಸಾಹುಕಾರ ಭೈರಗೊಂಡ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.
ನಾನು ನಾಮದೇವ ಡಾಂಗೆ ಉತ್ತಮ ಸ್ನೇಹಿತರಾಗಿದ್ದೇವೆ. ಈ ಪ್ರಕರಣ ಹೇಗೆ ನಡೆದಿದೆ ನನಗೆ ಗೊತ್ತಿಲ್ಲ. ನನ್ನ ಸುತ್ತಮುತ್ತಲಿನ ಗ್ರಾಮದಲ್ಲಿ ನಡೆಯುವ ಎಲ್ಲ ಚಿಕ್ಕಪುಟ್ಟ ನ್ಯಾಯ ಪಂಚಾಯ್ತಿ ಬಗೆಹರಿಸಲು ನನ್ನ ಮನೆಯಲ್ಲಿ ರಾಜಿ ಪಂಚಾಯಿತಿ ನಡೆಯುತ್ತದೆ. ನಾನು ಸಾಧ್ಯವಾದಷ್ಟು ಸಮಸ್ಯೆ ಬಗೆಹರಿಸಿ ಕಳುಹಿಸುತ್ತೇನೆ. ಆದರೆ ಚಿನ್ನದ ವ್ಯಾಪಾರಿಗೆ ಹಣದ ಬೇಡಿಕೆ ಇಟ್ಟಿರುವ ಕುರಿತು ತಮ್ಮ ವಿರುದ್ಧ ಎಫ್ಐಆರ್ ದಾಖಲಾಗಿದೆ ಎಂದು ಪೊಲೀಸರು ಬಂಧಿಸಿದ್ದರು. ಇದರ ಹಿಂದೆ ಯಾರ ಕೈವಾಡ ಇದೆ ಎನ್ನುವದನ್ನು ಸಮಯ ಬಂದಾಗ ಬಹಿರಂಗ ಪಡಿಸುತ್ತೇನೆ ಎಂದು ತಿಳಿಸಿದ್ರು. ತಾನು ಒಕ್ಕಲತನ, ಶಾಲೆ ನಡೆಸಿಕೊಂಡು ಆರಾಮಾಗಿದ್ದೇನೆ. ಆದರೂ ಕೆಲವರು ಎಲ್ಲದಕ್ಕೂ ಆಪಾದನೆ ಮಾಡುತ್ತಾರೆ. ಅವರೇ ಹೇಳಲಿ ನಾನು ಹೇಗೆ ಬದುಕಲಿ ಎಂದು ಬೇಸರ ವ್ಯಕ್ತಪಡಿಸಿದರು.
ಇನ್ನು ಹಣದ ಬೇಡಿಕೆ ಇಟ್ಟಿರುವ ಪ್ರಕರಣದ ಪ್ರಮುಖ ಆರೋಪಿ ಕಾಂತುಗೌಡ ಪಾಟೀಲ ಬಂಧನದ ನಂತರವಷ್ಟೇ ಪ್ರಕರಣದ ಸತ್ಯಾಸತ್ಯತೆ ಬಹಿರಂಗಗೊಳ್ಳಬಹುದು.