ವಿಜಯಪುರ: ಕೆಪಿಸಿಸಿ ಅಧ್ಯಕ್ಷರ ನೇಮಕ ಈಗ ಹೈಕಮಾಂಡ್ ಅಂಗಳದಲ್ಲಿದೆ. ಈ ಬಾರಿ ಉತ್ತರ ಕರ್ನಾಟಕಕ್ಕೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡಬೇಕು ಎಂದು ಮಾಜಿ ಸಚಿವ ಎಂ. ಬಿ. ಪಾಟೀಲ ಒತ್ತಾಯಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಅಧ್ಯಕ್ಷ ಸ್ಥಾನಕ್ಕೆ ಯಾವುದೇ ಲಾಬಿ ಮಾಡಿಲ್ಲ. ಪಕ್ಷ ಅಧಿಕಾರಕ್ಕೆ ಬರಬೇಕಾದರೆ ಏನು ಮಾಡಬೇಕು ಎಂಬುದನ್ನು ಸೋನಿಯಾ ಗಾಂಧಿ ಸೇರಿದಂತೆ ಹೈಕಮಾಂಡ್ ಗಮನಕ್ಕೆ ತಂದಿದ್ದೇನೆ. ಕಾರ್ಯಾಧ್ಯಕ್ಷರ ಸಂಖ್ಯೆ ಹೆಚ್ಚಿಸಬೇಕು ಎಂಬುದು ಸಿದ್ಧರಾರಾಮಯ್ಯ ಅವರ ನಿಲುವಲ್ಲ. ಇದೆಲ್ಲಾ ಮಾಧ್ಯಮಗಳ ಊಹಾಪೋಹ ಎಂದರು.
ಪ್ರತಿಪಕ್ಷದ ಸ್ಥಾನದಲ್ಲಿ ದಕ್ಷಿಣ ಕರ್ನಾಟಕದವರಿದ್ದಾರೆ. ಈ ಹಿನ್ನೆಲೆ ಅಧ್ಯಕ್ಷ ಸ್ಥಾನವನ್ನು ಉತ್ತರ ಕರ್ನಾಟಕದವರಿಗೆ ನೀಡಬೇಕು ಎಂಬುದು ಎಲ್ಲರ ಬಯಕೆಯಾಗಿದೆ. ಯಾವ ಜಾತಿಯವರಿಗೆ ನೀಡಬೇಕು ಎಂಬುದನ್ನು ಹೈಕಮಾಂಡ್ ನಿರ್ಧರಿಸಲಿದೆ. ನಾನಾ ಸಮೀಕರಣ ನಡೆಸಿ ಸಿದ್ಧರಾಮಯ್ಯನವರು ನನ್ನ ಹೆಸರು ಶಿಫಾರಸು ಮಾಡಿದ್ದಾರೆ. ನನಗೆ ಅಧ್ಯಕ್ಷ ಸ್ಥಾನ ನೀಡಿದರೆ ನಿಭಾಯಿಸುವ ಸಾಮರ್ಥ್ಯವಿದೆ ಎಂದು ಹೇಳಿದರು.