ವಿಜಯಪುರ: ಪೇಜಾವರ ಶ್ರೀಗಳ ಸವಾಲಿಗೆ ಲಿಂಗಾಯತ ಸ್ವತಂತ್ರ ಧರ್ಮ ಹೋರಾಟಗಾರರು ಬದ್ಧರಾಗಿದ್ದೇವೆ. ತಟಸ್ಥ ಸ್ಥಳ ಮತ್ತು ಪಕ್ಷದಲ್ಲಿ ಬಹಿರಂಗ ಚರ್ಚೆ ನಡೆಯಬೇಕು. ಈ ಚರ್ಚೆಯಲ್ಲಿ ಲಿಂಗಾಯತ ಸ್ವತಂತ್ರ ಧರ್ಮದ ಬಗ್ಗೆ ಇರುವ ವಾದವನ್ನು ಮುಂದಿಟ್ಟು ಪೇಜಾವರ ಶ್ರೀಗಳನ್ನೂ ಬಸವ ಧರ್ಮಕ್ಕೆ ಸೆಳೆಯಲು ಪ್ರಯತ್ನಿಸುತ್ತೇವೆ ಎಂದು ಮಾಜಿ ಸಚಿವ ಎಂ.ಬಿ. ಪಾಟೀಲ್ ಹೇಳಿದರು.
ನಿನ್ನೆಯಷ್ಟೇ ಪೇಜಾವರ ಶ್ರೀಗಳ ವಿರುದ್ಧ ಕಿಡಿಕಾರಿದ್ದ ಮಾಜಿ ಎಂ. ಬಿ. ಪಾಟೀಲ್ ಇಂದು ಮತ್ತೆ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಸಮಾಜದಲ್ಲಿನ ಅನಿಷ್ಠ, ಪದ್ಧತಿ ಅಸಮಾನತೆ, ಮೇಲು ಕೀಳು ಭಾವನೆ ಹೋಗಲಾಡಿಸಲು ಬಸವಣ್ಣ, ಬಸವಾದಿ ಶರಣರರು ಶ್ರೇಷ್ಠ ಬಸವ ಧರ್ಮ ಹುಟ್ಟು ಹಾಕಿದ್ದಾರೆ. ಲಿಂಗಾಯತ ಧರ್ಮದಲ್ಲಿ ಹುಳುಕು ಇರಲು ಸಾಧ್ಯವೇ ಇಲ್ಲ. ಅನುಭವ ಮಂಟಪದ ಪರಿಕಲ್ಪನೆಯಲ್ಲಿ ಸ್ಥಾಪಿತವಾದ ಜಾತಿ ರಹಿತ ಧರ್ಮ ಇದಾಗಿದೆ ಎಂದು ತಿಳಿಸಿದರು.
ಹಿಂದೂ ಒಂದು ಧರ್ಮ ಅಲ್ಲ, ಅದು ಸನ್ಮಾರ್ಗ. ಪ್ರಧಾನಿ ಕೂಡ ಇದನ್ನು ಹೇಳಿದ್ದಾರೆ. ಅದನ್ನಾದರೂ ಪೇಜಾವರ ಶ್ರೀಗಳು ತಿಳಿದುಕೊಳ್ಳಲಿ. ಪೇಜಾವರ ಶ್ರೀಗಳೇನೂ ಪ್ರಧಾನಿಯಲ್ಲ, ಅವರು ಪ್ರಧಾನಿಯಂತೆ ವರ್ತಿಸುವುದು ಬೇಡ. ಹಿಂದೂ ಜೀವನ ಪದ್ಧತಿ ಇದು. ಇದರ ಅರಿವು ಅವರಿಗೆ ಇರಬೇಕು. ಆ ಅರ್ಥದಲ್ಲಿ ನಾವೂ ಕೂಡ ಹಿಂದೂಗಳೇ. ಜೈನರು, ಸಿಖ್, ಬೌದ್ಧರ ರೀತಿ ಲಿಂಗಾಯತ ಕೂಡ ಒಂದು ಸ್ವತಂತ್ರ ಧರ್ಮವಾಗಬೇಕು. ಲಿಂಗಾಯತ ಧರ್ಮ ಜಾಗತಿಕ ಧರ್ಮವಾಗಬೇಕು ಎಂಬುದು ನಮ್ಮ ಉದ್ದೇಶ. ವಿಜಯಪುರ ಜಿಲ್ಲೆಯಲ್ಲಿ ಹುಟ್ಟಿದ ಲಿಂಗಾಯಿತ ಧರ್ಮ ಜಾಗತಿಕ ಧರ್ಮವಾಗಬೇಕು, ಜಾಗತಿಕ ಸಂಸ್ಕೃತಿಯಾಗಬೇಕು. ಲಿಂಗಾಯತ ಧರ್ಮಗಳಲ್ಲಿ ಹುಳುಕುಗಳಿದ್ದರೆ ಸ್ವಾಮೀಜಿ ತೋರಿಸಲಿ. ಅವರು ಪದೇ ಪದೇ ಇದನ್ನು ಕೆದಕುವುದು ಸರಿಯಲ್ಲ ಎಂದು ಹೇಳಿದರು.
ಮಹಾರಾಷ್ಟ್ರ ಸರ್ಕಾರದಿಂದ ಗೊಂದಲ:
ಇನ್ನು ಆಲಮಟ್ಟಿ ಜಲಾಶಯದಲ್ಲಿ 518 ಮೀ.ವರೆಗೆ ಮಾತ್ರ ನೀರು ಸಂಗ್ರಹಿಸಲು ಮಹಾರಾಷ್ಟ್ರ ಸರ್ಕಾರ ಪತ್ರ ಬರೆದ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಮಹಾರಾಷ್ಟ್ರದ ವಾದದಲ್ಲಿ ಹುರುಳಿಲ್ಲ. ನಾವು 524 ಮೀಟರ್ಗೆ ಜಲಾಶಯದ ಎತ್ತರವನ್ನು ಹೆಚ್ಚಿಸುತ್ತೇವೆ. ಈ ಹಿಂದಿನಿಂದಲೂ ಮಹಾರಾಷ್ಟ್ರ ಈ ರೀತಿಯ ಗೊಂದಲ ಸೃಷ್ಠಿಸುತ್ತಲೇ ಬಂದಿದೆ ಎಂದರು.
ನೀರು ಬಿಡುವಾಗ ಒಂದು ಮಾತು, ಪ್ರವಾಹ ಸಂದರ್ಭದಲ್ಲಿ ಮತ್ತೊಂದು ಹೇಳಿಕೆ ನೀಡುವುದು ಮಹಾರಾಷ್ಟ್ರದ ಹಳೆಯ ಚಾಳಿಯಾಗಿದೆ. ನಾವು ಎಷ್ಟು ನೀರು ಸಂಗ್ರಹಿಸಬೇಕು ಎಂದು ಹೇಳಲು ಅವರು ಯಾರು? ಎಂದು ಪ್ರಶ್ನಿಸಿದರು. ಇನ್ನು ತಮಿಳುನಾಡಿಗೆ ಕರ್ನಾಟಕದಿಂದ ನೀರು ಬಿಡುಗಡೆ ವಿಚಾರವಾಗಿ ಕಾವೇರಿ ನಿರ್ವಹಣೆ ಮಂಡಳಿ ನಿರ್ದೇಶನ ಹಾಗೂ ಅಲ್ಲಿ ಸಂಗ್ರಹವಿರುವ ನೀರಿನ ಬಗ್ಗೆ ತಮಗೆ ಮಾಹಿತಿ ಇಲ್ಲ ಎಂದು ಹೇಳಿದರು.